ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಎಲಿಜಬೆತ್ ದೀಪಿಕಾ ಪೊನ್ನುರಾಜು ಸುಳ್ಯದಲ್ಲಿ ಪತ್ತೆ

ಸುಳ್ಯ: ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಎಲಿಜಬೆತ್ ದೀಪಿಕಾ ಪೊನ್ನುರಾಜು ಅವರನ್ನು ಪೊಲೀಸರು ಸುಳ್ಯದ ಅರಂತೋಡಿನಲ್ಲಿ ಪತ್ತೆ ಮಾಡಿದ್ದಾರೆ. ಕ್ರಿಮಿನಾಲಜಿ ಮತ್ತು ಫಾರೆನ್ಸಿಕ್ ಸೈನ್ಸ್ ವಿಷಯದಲ್ಲಿ ಮೊದಲನೇ ವರ್ಷದ ಎಂಎಸ್ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ದೀಪಿಕಾ ಮೇ 7 ರಂದು ಎರಡನೇ ಸೆಮಿಸ್ಟರ್ ಪರೀಕ್ಷೆ ಮುಗಿಸಿದ ಬಳಿಕ ನಾಪತ್ತೆಯಾಗಿದ್ದಳು. ದೀಪಿಕಾ ನಾಪತ್ತೆಯಾದ ಬಗ್ಗೆ ಮನೆಯವರು ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೀಪಿಕಾ ಪುಸ್ತಕ ಮತ್ತು ಮೊಬೈಲ್ ಅನ್ನು ಕಾಲೇಜಿನಲ್ಲಿ ಬಿಟ್ಟು ನಾಪತ್ತೆಯಾಗಿದ್ದರಿಂದ ಭಾರೀ ಕುತೂಹಲ ಉಂಟಾಗಿತ್ತು. ಪೊಲೀಸರು ಹುಡುಕಾಟ ನಡೆಸಿದರು ಯಾವುದೇ ಸುಳಿವು ದೊರಕಿರಲಿಲ್ಲ.ಮೇ 9ರಂದು ಪಾಂಡೇಶ್ವರ ಠಾಣೆಗೆ ವಿದ್ಯಾರ್ಥಿನಿ ಸುಳ್ಯ ತಾಲೂಕಿನ ಅರಂತೋಡಿನಲ್ಲಿ ಇದ್ದಾಳೆ ಎಂಬ ಮಾಹಿತಿ ದೊರಕಿದ್ದು, ಆಕೆಯನ್ನು ಮಂಗಳೂರಿಗೆ ಕರೆತಂದು ಪೋಷಕರ ವಶಕ್ಕೆ ಒಪ್ಪಿಸಿದ್ದಾರೆ. ಎಂಎಸ್ಸಿ ಪರೀಕ್ಷೆಯನ್ನು ಎದುರಿಸುವುದು ಕಷ್ಟವಾಗಿತ್ತು. ಅತಿಯಾದ ಒತ್ತಡದಿಂದಾಗಿ ಸ್ವಲ್ಪ ವಿಶ್ರಾಂತಿ ಪಡೆಯಬೇಕೆಂದು ನಿರ್ಧರಿಸಿ ತೆರಳಿದ್ದಾಗಿ ಆಕೆ ಪೊಲೀಸರಿಗೆ ತಿಳಿಸಿದ್ದಾಳೆ.ದೀಪಿಕಾ ಪರೀಕ್ಷೆ ಮುಗಿಸಿದ ಆಕೆ ಕಾಲೇಜಿನಿಂದ ಹೊರಬಂದು ಕಂಕನಾಡಿಯಲ್ಲಿ ಚಿಕ್ಕಮಗಳೂರಿಗೆ ತೆರಳುವ ಬಸ್ಸನ್ನು ಹತ್ತಿದ್ದಾಳೆ. ಕೆಎಸ್ಆರ್ ಟಿಸಿ ಬಸ್ಸಿನಲ್ಲಿ ಉಚಿತ ಇರುವುದರಿಂದ ನೇರವಾಗಿ ಚಿಕ್ಕಮಗಳೂರಿಗೆ ತೆರಳಿದ್ದು, ಅಲ್ಲಿಂದ ಮೈಸೂರಿಗೆ ಹೋಗುವ ಬಸ್ ಹತ್ತಿದ್ದಾಳೆ. ಮತ್ತೆ ಅಲ್ಲಿಂದ ಮಡಿಕೇರಿಗೆ ಬಸ್ಸಿನಲ್ಲಿ ಬಂದು ಬಸ್ ನಿಲ್ದಾಣದಲ್ಲಿ ತಮಿಳು ಮಾತನಾಡುವ ಹುಡುಗಿ ಒಬ್ಬಳು ಪರಿಚಯ ಆಗಿದ್ದು ಆಕೆಯೊಂದಿಗೆ ಬುಧವಾರ ಸುಳ್ಯಕ್ಕೆ ಬಂದಿದ್ದಾಳೆ. ಸುಳ್ಯದ ಅರಂತೋಡಿನಲ್ಲಿ ಆಕೆಯ ಮನೆಯಲ್ಲಿ ರಾತ್ರಿ ಉಳಿದುಕೊಂಡಿದ್ದಾಳೆ.ಮೂಲತ: ತಮಿಳುನಾಡಿನವಳಾಗಿದ್ದರಿಂದ ದೀಪಿಕಾಗೆ ತಮಿಳು ಬಿಟ್ಟರೆ ಕನ್ನಡ ಸರಿಯಾಗಿ ಮಾತನಾಡಲು ಬರುತ್ತಿರಲಿಲ್ಲ. ದೀಪಿಕಾ ತಂದೆ ತಾಯಿ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಸುಳ್ಯದಲ್ಲಿ ಹುಡುಗಿ ಇರುವ ಬಗ್ಗೆ ಅವರ ಮನೆಯವರು ಪರಿಚಯದ ಮಂಗಳೂರಿನ ಪೊಲೀಸರಿಗೆ ತಿಳಿಸಿದ್ದಾರೆ. ಅದರಂತೆ ಪಾಂಡೇಶ್ವರ ಠಾಣೆಯ ಪೊಲೀಸರು ಅರಂತೋಡು ತೆರಳಿ ಆಕೆಯನ್ನು ಮಂಗಳೂರಿಗೆ ಕರೆತಂದಿದ್ದಾರೆ.

Leave a Reply