ಬೆಂಗಳೂರು: ಈ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಬಾಗಲಕೋಟೆಯ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ರಾಜ್ಯಕ್ಕೆ ಫಸ್ಟ್ ಬಂದಿದ್ದಾರೆ. 625ಕ್ಕೆ 625 ಅಂಕ ಪಡೆಯುವ ಮೂಲಕ ಇಡೀ ನಾಡಿಗೆ ಕೀರ್ತಿ ತಂದಿದ್ದಾರೆ. ಅಂಕಿತಾ ಅವರ ಈ ಸಾಧನೆಗೆ ಸಿಎಂ ಸಿದ್ದರಾಮಯ್ಯ ಅಭಿನಂದಿಸಿದ್ದಾರೆ. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾ| ಮೆಳ್ಳಿಗೇರಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ ಕುಮಾರಿ ಅಂಕಿತ ಹಾಗೂ ದ್ವಿತೀಯ Rank ಪಡೆದ ಮಂಡ್ಯ ತಾಲೂಕಿನ ತುಂಬಿಗೆರೆ ಮೊರಾರ್ಜಿ ಶಾಲೆಯ ವಿದ್ಯಾರ್ಥಿ ನವನೀತ್ ಕೆ.ಸಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸನ್ಮಾನಿಸಿದರು. ಮುಂದಿನ ವಿದ್ಯಾಭ್ಯಾಸ ಯಶಸ್ವಿಯಾಗಿ ಸಾಗಲಿ ಎಂದು ಮುಖ್ಯಮಂತ್ರಿಗಳು ಶುಭ ಹಾರೈಸಿದರು.
ಸಿಎಂ ಸಿದ್ದರಾಮಯ್ಯ ಸರ್ಕಾರಿ ನಿವಾಸ ಕಾವೇರಿಯಲ್ಲಿ ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಅಂಕಿತಾ ಹಾಗೂ 623 ಅಂಕ ಪಡೆದು ಮೂರನೇ ಸ್ಥಾನ ಪಡೆದ ಮಂಡ್ಯದ ಕನ್ನಲಿ ಗ್ರಾಮದ ನವನೀತ್ಗೂ ಅಭಿನಂದನೆ ಸಲ್ಲಿಸಲಾಯಿತು. ಮುಖ್ಯಮಂತ್ರಿಗಳಿಂದ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಕುಮಾರಿ ಅಂಕಿತ, ಸಾರ್ ನಿಮ್ಮ ಸಾಧನೆಗಳು, ನಿಮ್ಮ ಮಾತುಗಳು ನನ್ನ ಈ ಯಶಸ್ಸಿಗೆ ಪ್ರೇರಣೆ ಮತ್ತು ಪ್ರೋತ್ಸಾಹ ನೀಡಿದವು ಎಂದು ತಿಳಿಸಿದರು. ಮುಂದೆ ಐಎಎಸ್ ಅಧಿಕಾರಿ ಆಗಬೇಕೆಂಬ ಬಯಕೆಯನ್ನು ಅಂಕಿತಾ ವ್ಯಕ್ತಪಡಿಸಿದರು. ಪಿಯುಸಿ ದಾಖಲಾತಿ ಸೇರಿದಂತೆ ಮುಂದಿನ ವಿದ್ಯಾಭ್ಯಾಸಕ್ಕೆ ನೆರವು ಒದಗಿಸುವುದಾಗಿ ಸಿಎಂ ಭರವಸೆ ನೀಡಿದರು.