
ಮಂಗಳೂರು: ಮೋಕ್ಷ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಭಾಸ್ಕರ್ ನಾಯ್ಕ್ ರಚಿಸಿ ನಿರ್ದೇಶಿಸಿ, ನಿರ್ಮಿಸಿರುವ, ಕರಾವಳಿ ಭಾಗದ ಕಥಾಹಂದರ ಹೊಂದಿರುವ “ಕುದ್ರು” ಚಿತ್ರ ಅಕ್ಟೋಬರ್ 13 ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಗುತ್ತಿದೆ” ಎಂದು ಚಿತ್ರದ ನಾಯಕ ನಟ ಹರ್ಷಿತ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
“ಕುದ್ರು ಎಂದರೆ ನೀರಿನಿಂದ ಸುತ್ತುವರೆದ ದ್ವೀಪ. ಈ ದ್ವೀಪದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮೂರು ಕಟುಂಬಗಳು ಸಹಬಾಳ್ವೆಯಿಂದ ಜೀವನ ನಡೆಸುತ್ತಿರುತ್ತಾರೆ. ಆ ಸಮಯದಲ್ಲಿ ವಾಟ್ಸಪ್ ಸಂದೇಶವೊಂದರಿಂದ ಎಲ್ಲರಲ್ಲೂ ಮನಸ್ತಾಪ ಬರುತ್ತದೆ. ಚಿತ್ರದ ಮೊದಲ ಭಾಗದ ಕಥೆ ಕಾಲೇಜಿನಲ್ಲಿ ನಡೆಯುತ್ತದೆ. ಆನಂತರ ಕುತೂಹಲ ಮೂಡಿಸುವ ಕಥಾಹಂದರವಿದೆ. ಅದನ್ನು ಚಿತ್ರದಲ್ಲೇ ನೋಡಬೇಕು. ಉಡುಪಿ, ಮಲೆನಾಡು, ಗೋವಾ ಹಾಗೂ ಆಯಿಲ್ ರಿಗ್ ನಲ್ಲಿ ಚಿತ್ರೀಕರಣವಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಜನಪ್ರಿಯವಾಗಿದೆ” ಎಂದರು.
ಈ ಚಿತ್ರದಲ್ಲಿ ಮುಸ್ಲಿಂ ಸಮುದಾಯದ ಹುಡುಗಿಯಾಗಿ ನಟಿ ಡೈನ ಡಿಸೋಜ, ಮುಸ್ಲಿಂ ಹುಡುಗನಾಗಿ ನಟ ಫರ್ಹಾನ್. ಮಂಗಳೂರಿನ ನಮಿತಾ, ಪ್ರವೀಣ್ ಬಂಗೇರ, ಕಾಂತಾರ ಸತೀಶ್ ಆಚಾರ್ಯ ನಟಿಸಿದ್ದಾರೆ.
“ಕುದ್ರು” ಚಿತ್ರದಲ್ಲಿ ಬ್ರಾಹ್ಮಣ ಹುಡುಗನಾಗಿ ಹರ್ಷಿತ್ ಶೆಟ್ಟಿ ಅಭಿನಯಿಸಿದ್ದಾರೆ. ಕ್ರಿಶ್ಚಿಯನ್ ಹುಡುಗನಾಗಿ ಗಾಡ್ವಿನ್ ಹಾಗೂ ಬ್ರಾಹ್ಮಣ ಹುಡುಗಿ ಪಾತ್ರದಲ್ಲಿ ನಾಯಕಿ ಪ್ರಿಯಾ ಹೆಗ್ಡೆ ನಟಿಸಿದ್ದಾರೆ.
ಛಾಯಾಗ್ರಹಣ ಶ್ರೀ ಪುರಾಣಿಕ್, ಪ್ರದೀಪ್ ಹಾಗು ಉಡುಪಿ ಪ್ರಜ್ವಲ್, ಪ್ರತೀಕ್ ಕುಂದು ಸಂಗೀತ ನಿರ್ದೇಶನ ಹಾಗೂ ಶ್ರೀನಿವಾಸ್ ಕಲಾಲ್ ಅವರ ಸಂಕಲನವಿರುವ “ಕುದ್ರು” ಚಿತ್ರಕ್ಕೆ ಉಡುಪಿ ಕೃಷ್ಣ ಆಚಾರ್ ಸಂಭಾಷಣೆ ಬರೆದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಹರ್ಷಿತ್ ಶೆಟ್ಟಿ, ಪ್ರಿಯಾ ಹೆಗ್ಡೆ, ಸತೀಶ್ ಆಚಾರ್ಯ, ಫರ್ಹಾನ್, ನಮಿತಾ, ಡಯಾನಾ ಡಿಸೋಜ, ಪ್ರವೀಣ್ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.


