Visitors have accessed this post 700 times.

ಮಂಗಳೂರು: ಬಿಲ್ ಪಾವತಿಗೆ 15% ಕಮಿಷನ್ ಲಂಚ ಕೇಳಿದ ಮಹಿಳಾ ಅಧಿಕಾರಿ ಲೋಕಾಯುಕ್ತ ಬಲೆಗೆ

Visitors have accessed this post 700 times.

ಮಂಗಳೂರು: ನಿವೃತ್ತ ಅರಣ್ಯಾಧಿಕಾರಿಯೊಬ್ಬರಿಂದ ಬಿಲ್ ಪಾವತಿ ಗೆ ಬಿಲ್ ಮೊತ್ತದ 15 % ಕಮಿಷನ್ ಲಂಚ ಕೇಳಿದ ಮಹಿಳಾ ಅಧಿಕಾರಿಯೊಬ್ಬರು ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮಂಗಳೂರು ವಿಭಾಗದ ಉಪ ಕೃಷಿ ನಿರ್ದೇಶಕಿ ಭಾರತಮ್ಮ ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿ.2022-23ನೇ ಸಾಲಿನಲ್ಲಿ ಕೃಷಿ ಇಲಾಖೆಯ ಅಧೀನದಲ್ಲಿ ಬರುವ ಜಲಾನಯನ ಅಭಿವೃದ್ಧಿ ವಿಭಾಗದ “ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ WDC 20” ಯೋಜನೆಯಡಿ ಬಂಟ್ವಾಳ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಸರಕಾರದ ವತಿಯಿಂದ ಉಚಿತವಾಗಿ ವಿವಿಧ ಜಾತಿ ಅರಣ್ಯ ಮತ್ತು ತೋಟಗಾರಿಕಾ ಗಿಡಗಳನ್ನು ನೀಡಲಾಗಿತ್ತು. ಇದನ್ನು ಕೆಲವು ನರ್ಸರಿಗಳ ಮೂಲಕ ಪಡೆದುಕೊಳ್ಳಲಾಗಿತ್ತು, ಅಲ್ಲದೆ ಅರಣ್ಯ ಇಲಾಖೆ ಗುತ್ತಿಗೆದಾರರಿಂದ ಗಿಡಗಳನ್ನು ನಾಟಿ ಮಾಡಿಸಿತ್ತು. ಈ ಒಟ್ಟಾರೆ ಕಾಮಗಾರಿಗೆ 50 ಲಕ್ಷದಷ್ಟು ಹಣ ಸರಕಾರದಿಂದ ಬರಬೇಕಾಗಿತ್ತು. ಈ ಹಿನ್ನಲೆ ಕೃಷಿ ಇಲಾಖೆಯಲ್ಲಿ ಅಂದು ವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಇದೀಗ ನಿವೃತ್ತರಾಗಿರುವ ಪರಮೇಶ್ ಎನ್.ಪಿ ಅವರು ಬಿಲ್ ಬಾಕಿ ಪಾವತಿಗೆ ಮಂಗಳೂರು ವಿಭಾಗದ ಉಪಕೃಷಿ ನಿರ್ದೇಶಕರಾದ ಶ್ರೀಮತಿ ಭಾರತಮ್ಮ ಅವರಲ್ಲಿ ಕೇಳಿಕೊಂಡಿದ್ದಾರೆ. ಈ ವೇಳೆ ಅಧಿಕಾರಿ ಭಾರತಮ್ಮ ಅವರು ಬಿಲ್ ಪಾವತಿಸಬೇಕಾದರೆ ಬಿಲ್ ಮೊತ್ತದ 15 % ಹಣವನ್ನು ಮುಂಗಡವಾಗಿ ನನಗೆ ಲಂಚದ ರೂಪದಲ್ಲಿ ನೀಡಬೇಕು ಇಲ್ಲವಾದರೇ ನಾನು ಬಿಲ್ ಪಾವತಿ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ಈ ಹಿನ್ನಲೆ ಪರಮೇಶ್ ಅವರು ಅಕ್ಟೋಬರ್ 20 ರಂದು ಮತ್ತೆ ಅಧಿಕಾರಿ ಭಾರತಮ್ಮ ಅವರ ಹತ್ತಿರ ಮಾತನಾಡಿದಾಗ ಬಿಲ್ ಪಾವತಿಗೆ 1 ಲಕ್ಷ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಪರಮೇಶ್ ಅವರು ಲೋಕಾಯುಕ್ತ ದೂರು ನೀಡಿದ್ದರು. ಇಂದು ಮಂಗಳೂರು ಉಪ ಕೃಷಿ ನಿರ್ದೇಶಕಿಯಾದ ಶ್ರೀಮತಿ ಭಾರತಮ್ಮ ಅವರು ಪರಮೇಶ್ ಅವರಿಂದ 1 ಲಕ್ಷ ಹಣ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಆರೋಪಿಯನ್ನು ಬಂಧಿಸಿರುವ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Leave a Reply

Your email address will not be published. Required fields are marked *