Visitors have accessed this post 448 times.
ಉಳ್ಳಾಲ: ಮಂಗಳೂರು ದಸರಾ ತೆರಳುತ್ತಿದ್ದ ಬೈಕ್ ಚಾಲಕನ ಧಾವಂತಕ್ಕೆ ರಸ್ತೆ ದಾಟುತ್ತಿದ್ದ ಪಾದಚಾರಿ ಮಹಿಳೆ ಸಾವನ್ನಪ್ಪಿರುವ ಘಟನೆ ಬಬ್ಬುಕಟ್ಟೆ ಸೋಝಾ ಇಲೆಕ್ಟ್ರಿಕಲ್ಸ್ ಎದುರುಗಡೆ ಸಂಭವಿಸಿದೆ.
ಬಾಗಲಕೋಟೆ ಬಾದಾಮಿ ಲಖಮಾಪುರ ನಿವಾಸಿ ಶಿವಪ್ಪ ದೊಡ್ಡಮನಿ ಎಂಬವರ ಪತ್ನಿ ಎಲ್ಲವ್ವ ಶಿವಪ್ಪ ದೊಡ್ಡಮನಿ (50) ಮೃತ ಮಹಿಳೆ.
ಶಿವಪ್ಪ ಅವರು ಕೂಲಿಕಾರ್ಮಿಕರಾಗಿದ್ದು, ಸಂಜೆ ನಂತರ ಬಬ್ಬುಕಟ್ಟೆ ಬಳಿಯ ಸೋಝಾ ಇಲೆಕ್ಟ್ರಿಕಲ್ಸ್ ಬಳಿಯ ಮನೆಯಲ್ಲಿ ವಾಚ್ ಮೆನ್ ವೃತ್ತಿ ನಿರ್ವಹಿಸುತ್ತಿದ್ದರು. ಎರಡು ದಿನಗಳ ಹಿಂದಷ್ಟೇ ಬಾದಾಮಿಯಿಂದ ಪತ್ನಿ ಎಲ್ಲವ್ವ ಬಂದು ಪತಿ ಜೊತೆಗೆ ತಂಗಿದ್ದರು. ಇಂದು ಸಂಜೆ 8 ಗಂಟೆ ಸುಮಾರಿಗೆ ಮನೆಯ ವಿರುದ್ಧ ಧಿಕ್ಕಿನಲ್ಲಿರುವ ಅಂಗಡಿಗೆ ಸಾಮಗ್ರಿ ತರಲೆಂದು ತೆರಳಿದ್ದರು. ಅಲ್ಲಿಂದ ವಾಪಸ್ಸಾಗಿ ರಸ್ತೆ ದಾಟುವ ಸಂದರ್ಭ ಮಂಗಳೂರು ದಸರಾ ತೆರಳುತ್ತಿದ್ದ ದೈಗೋಳಿ ನಿವಾಸಿ ಗಗನ್ ಎಂಬಾತನ ಬೈಕ್ ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಮಹಿಳೆಯನ್ನು ತಕ್ಷಣ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಢಿಕ್ಕಿಯ ರಭಸಕ್ಕೆ ಬೈಕ್ ರಸ್ತೆಯಲ್ಲೇ ಜಾರಿಕೊಂಡು ದೂರಕ್ಕೆ ಕ್ರಮಿಸಿ ರಸ್ತೆ ವಿಭಜಕಕ್ಕೆ ಗುದ್ದಿ ನಿಂತಿದೆ. ಬೈಕಿನಲ್ಲಿದ್ದ ಸವಾರ ಗಗನ್ ಹಾಗೂ ಇನ್ನೋರ್ವನಿಗೆ ಗಾಯವಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.