ಸುಳ್ಯ: ಮನೆ ನಿರ್ಮಿಸಿಕೊಡುವುದಾಗಿ ಬಡ ಮಹಿಳೆಗೆ ವಂಚಿಸಿದ ಹಿಂದೂ ಮುಖಂಡ..!

ಸುಳ್ಯ: ವಿವಿಧ ಸಂಘಟನೆಗಳು ಇಂದು ಬಡವರ ಕಣ್ಣಿರನ್ನು ಒರೆಸುವ ಕೆಲಸ ಮಾಡುತ್ತಿರುವ ಶ್ಲಾಘನೀಯವಾದ ವಿಚಾರ. ಆದರೆ ಇಂದಿಗೂ ಕೂಡಾ ಕೆಲವೊಂದು ಹಿಂದು ಸಂಘಟನೆಗಳು, ಸಂಘಟನೆಗಳ ನಾಯಕರು ಬಡವರಿಗೆ ನೆರವಾಗುವುದಾಗಿ ಹೇಳಿ ಅವರಿಂದಲೇ ಹಣ ಪಡೆದು ವಂಚನೆ ಮಾಡುತ್ತಿರುವ ಪ್ರಕರಣಗಳು ವರದಿಯಾಗುತ್ತಲೇ ಇದೆ.

ಅದಕ್ಕೆ ಒಂದು ಉದಾಹರಣೆ ಸುಳ್ಯದ ಲತೇಶ್‌ ಗುಂಡ್ಯ ಎಂಬಾತ ಮಾಡಿದ ವಂಚನೆ ಪ್ರಕರಣ. ಹಿಂದೂ ಸಂಘಟನೆಗಳ ಹೆಸರು ಬಳಸಿಕೊಂಡು ‘ಹಿಂದೂ ಮುಖಂಡ ಲತೇಶ್ ಗುಂಡ್ಯ 420 ಕೆಲಸಕ್ಕೆ ಇಳಿದಿದ್ದಾನೆ ಎಂದು ಹೇಳಲಾಗುತ್ತಿದೆ. ತೀರಾ ಬಡತನದಿಂದ ಕೂಡಿದ ಮಹಿಳೆಗೆ  ಮೋಸ ಮಾಡಿ ಹಣ ಲೂಟಿ ಹೊಡೆದಿರುವ ಆರೋಪವನ್ನು ಈತ ಎದುರಿಸುತ್ತಿದ್ದಾನೆ. ಸುಳ್ಯ ಜಾಲ್ಸೂರು ಸಮೀಪದ ಕುಂದ್ರುಕೋಡಿಯ ಲಕ್ಷ್ಮೀ ಎಂಬವರಿಗೆ  ಉಚಿತವಾಗಿ ಮನೆ ಕಟ್ಟಿಕೊಡುವುದಾಗಿ ಭರವಸೆ ನೀಡಿ ವಂಚನೆ ಎಸಗಿದ್ದಾನೆ ಎನ್ನಲಾಗಿದೆ.

ಸಂಘಟನೆಗಳ ಹೆಸರನ್ನ ಬಳಸಿಕೊಂಡು ಮನೆ ನಿರ್ಮಾಣದ ಭರವಸೆ ನೀಡಿದ್ದ ಲತೇಶ್ ಗುಂಡ್ಯ ಮನೆ ಕಟ್ಟಿಕೊಡುತ್ತೇನೆಂದು ಲಕ್ಷ್ಮೀ ಅವರಿಂದಲೇ 52 ಸಾವಿರ ಹಣ ಪಡೆದು ಮೋಸಮಾಡಿದ್ದಾನೆ. ಲಕ್ಷ್ಮೀ ಕುಟುಂಬ ಈ ಹಿಂದೆ ಜೋಪಡಿ ಮನೆಯಲ್ಲಿತ್ತು. ಲಕ್ಷ್ಮೀ ಮತ್ತು ಅವರ ಮೂರು ಹೆಣ್ಣು ಮಕ್ಕಳು ಈ ಜೋಪಡಿಯಲ್ಲಿ ವಾಸ ಮಾಡಿಕೊಂಡಿದ್ದರು. ಈ ವೇಳೆ ಮನೆ ಕಟ್ಟಿಕೊಡುತ್ತೇನೆಂದು ಹೇಳಿಕೊಂಡು ಬಂದ ಲತೇಶ್ ಗುಂಡ್ಯ ಸಂಘಟನೆಯ ಹೆಸರಲ್ಲಿ ಉಚಿತವಾಗಿ ಮನೆಕಟ್ಟಿಕೊಡುವುದಾಗಿ ಹೇಳಿದ್ದಾನೆ. ಬಳಿಕ ಹಣ ನಮ್ಮಲ್ಲಿ ಕಡಿಮೆ ಇರುವುದಾಗಿ ಹೇಳಿ ಲಕ್ಷ್ಮೀ ಅವರಿಂದಲೇ 10 ಸಾವಿರ ಹಣ ಪಡೆದು ಹೋಗಿದ್ದಾನೆ. ಇದಾದ ಬಳಿಕ ಹತ್ತು ಸಾವಿರ ಸಾಕಾಗುವುದಿಲ್ಲ, ನೀವು ಗ್ರಾ.ಪಂ. ಗೆ ಅರ್ಜಿ ಹಾಕಿ ಮಂಜೂರಾದ ಹಣವನ್ನ ನೀಡಿ ಎಂದಿದ್ದಾನೆ. ಇದನ್ನೇ ನಂಬಿದ ಬಡ ಮಹಿಳೆ ಲಕ್ಷ್ಮೀ ಮತ್ತೆ 42 ಸಾವಿರದ 800 ಹಣವನ್ನೂ ಲತೇಶ್ ಗುಂಡ್ಯಗೆ ನೀಡಿದ್ದಾರೆ.

ಇಷ್ಟೆಲ್ಲ ಹಣ ನೀಡಿದ ಬಳಿಕ ಮನೆ ನಿರ್ಮಿಸಿ ಕೊಡದೆ ಫೋನ್ ಸಂಪರ್ಕಕ್ಕೂ ಸಿಗದೆ ಲಕ್ಷ್ಮೀಗೆ ಸತಾಯಿಸಿದ ಲತೇಶ್ ಗುಂಡ್ಯ ಫೋನ್‌ಗೆ ಸಿಗದೇ ತಪ್ಪಿಸಿಕೊಳ್ಳುತ್ತಿದ್ದಾನೆ ಎನ್ನುವ ಆರೋಪವನ್ನು ಲಕ್ಷ್ಮೀ ಮಾಡಿದ್ದಾರೆ. ಸದ್ಯ ಇದ್ದ ಜೋಪಡಿ ಮನೆಯನ್ನೂ ಕೆಡವಲು ಹೇಳಿದ್ದ ಲತೇಶ್ ಗುಂಡ್ಯನ ಮಾತು ಕೇಳಿ ಜೋಪಡಿಯನ್ನೂ ಕೆಡವಿದ ಲಕ್ಷ್ಮೀ ಬಾಡಿಗೆ ಮನೆಯಲ್ಲಿದ್ದು, ಸಂಕಷ್ಟ ಎದುರಿಸುತ್ತಿದ್ದಾರೆ. ಇದೀಗ ಲಕ್ಷ್ಮೀ ಲತೇಶ್ ಗುಂಡ್ಯನ ವಂಚನೆ ಬಗ್ಗೆ ವಿಶ್ವ ಹಿಂದೂ ಪರಿಷತ್ ಗೆ ದೂರು ನೀಡಿದ್ದಾರೆ. ಮನೆ ನಿರ್ಮಿಸಿಕೊಡುತ್ತೇನೆಂದು ಹೇಳಿದ್ದಲ್ಲದೇ ಸಂಘಟನೆಯ ಹೆಸರಿನಲ್ಲಿ ವಂಚನೆ ಮಾಡಿರುವ ಇದೇ ಆರೋಪಿ ಲತೇಶ್ ಗುಂಡ್ಯ ಕಳೆದ ಸುಳ್ಯ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಎಂಎಲ್ ಎ ಟಿಕೆಟ್ ಆಕಾಂಕ್ಷಿಯಾಗಿದ್ದ. ವಂಚಕ ಲತೇಶ್ ಗುಂಡ್ಯನಿಂದ ತನಗೆ ಅನ್ಯಾಯವಾಗಿದ್ದು, ನ್ಯಾಯ ದೊರಕಿಸಿಕೊಡುವಂತೆ ಅವರು ಮನವಿ ಮಾಡಿದ್ದಾರೆ.

Leave a Reply