Visitors have accessed this post 583 times.
ಮಂಗಳೂರು: ಪ್ರೇಯಸಿ ಸುತ್ತಾಟಕ್ಕೆ ಬಂದಿಲ್ಲವೆಂದು ಯುವಕನೊಬ್ಬ ಪಿಜಿ ಹಾಸ್ಟೆಲ್ ಕಟ್ಟಡಕ್ಕೆ ಕಲ್ಲೆಸೆದು ದಾಂಧಲೆ ನಡೆಸಿರುವ ಘಟನೆ ನಗರದ ಆಗ್ನೆಸ್ ಕಾಲೇಜು ಬಳಿ ಗುರುವಾರ ರಾತ್ರಿ ನಡೆದಿದೆ. ಸ್ಥಳದಲ್ಲಿ ಜಮಾಯಿಸಿದ ಜನತೆ ಹಿಡಿದು ಆತನಿಗೆ ಥಳಿಸಿ ಪೊಲೀಸರಿಕೊಪ್ಪಿಸಿದ್ದಾರೆ. ಸುಳ್ಯ ಮೂಲದ ವಿವೇಕ್ (18) ಎಂಬಾತ ಕೃತ್ಯ ಎಸಗಿರುವ ಆರೋಪಿ. ಈತ ಮಂಗಳೂರಿನಲ್ಲಿ ಇಲೆಕ್ಟ್ರಿಜ್ ಕೆಲಸ ಮಾಡುತ್ತಿದ್ದ. ನಗರದ ಆಗ್ನೆಸ್ ಬಳಿಯ ವಿದ್ಯಾರ್ಥಿನಿಯರ ಪಿಜಿಯಲ್ಲಿ ಕೆಲಸಕ್ಕಿದ್ದ ಯುವತಿಯೊಂದಿಗೆ ಪ್ರೀತಿ ಹೊಂದಿದ್ದ. ಗುರುವಾರ ಸಂಜೆ ಆಕೆಗೆ ಕರೆ ಮಾಡಿ, ಹೊರಗೆ ಸುತ್ತಾಡಲು ಬರುವಂತೆ ಕೇಳಿಕೊಂಡಿದ್ದ. ಆದರೆ ಯುವತಿ ಬರುವುದಿಲ್ಲ ಎಂದು ನಿರಾಕರಿಸಿದ್ದಾಳೆ. ಪದೇ ಪದೇ ಕರೆ ಮಾಡಿದರೂ ಕೆಲಸ ಇದೆಯೆಂದು ಹೇಳಿ ಆಕೆ ನಿರಾಕರಿಸಿದ್ದರಿಂದ ಸಿಟ್ಟಿಗೆದ್ದ ಯುವಕ ಪಿಜಿ ಹಾಸ್ಟೆಲ್ ಮೇಲೆ ಕಲ್ಲು ತೂರಾಟ ಮಾಡಿ ದಾಂಧಲೆ ಮಾಡಿದ್ದಾನೆ. ಪರಿಣಾಮ ಹಾಸ್ಟೆಲ್ ಕಿಟಕಿ, ಗಾಜು ಒಡೆದು ಹೋಗಿದೆ. ಯುವಕನನ್ನು ತಕ್ಷಣ ಸ್ಥಳೀಯರು ಹಿಡಿದು ಥಳಿಸಿದ್ದಾರೆ. ಬಳಿಕ ಕದ್ರಿ ಪೊಲೀಸರನ್ನು ಕರೆಸಿ ಅವರ ವಶಕ್ಕೆ ಒಪ್ಪಿಸಿದ್ದಾರೆ. ಯುವಕನ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಮದ್ಯದ ನಶೆಯಲ್ಲಿ ಆತ ಕಲ್ಲು ತೂರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.