ಉಡುಪಿ: ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ..!

ಮಲ್ಪೆ: ಉಡುಪಿಯ ನೇಜಾರು ಸಮೀಪ ಒಂದೇ ಕುಟುಂಬದ ನಾಲ್ವರ ಹತ್ಯೆ ನಡೆದಿದ್ದು ಹಬ್ಬದ ದಿನ ಸುದ್ದಿ ಕೇಳಿ ಜನ ಬೆಚ್ಚಿ ಬಿದ್ದಿದ್ದಾರೆ.ಮನೆಗೆ ನುಗ್ಗಿ ತಾಯಿ ಹಾಗೂ ಮೂವರು ಮಕ್ಕಳನ್ನು ಹತ್ಯೆ ಮಾಡಲಾಗಿದೆ. ವಿಷಯ ತಿಳಿದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಮಲ್ಪೆ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಹಸೀನಾ 46,ಅಫ್ನಾನ್ 23,ಅಯ್ನಾಝ್ 21 ,ಆಸಿಂ 12 ಕೊಲೆಗೀಡಾದವರು.

ದೀಪಾವಳಿ ಹಬ್ಬದ ದಿನ ಹತ್ಯೆ ನಡೆದಿರುವುದನ್ನು ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

ಒಂದೇ ಕುಟುಂಬದ ನಾಲ್ವರ ಹತ್ಯೆ ಹಿಂದೆ ದರೋಡೆ ಕೃತ್ಯದ ಶಂಕೆ ವ್ಯಕ್ತವಾಗಿದೆ. ಈ ಮನೆಯ ಯಜಮಾನ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಮನೆಯಲ್ಲಿ ಮೂವರು ಮಕ್ಕಳೊಂದಿಗೆ ತಾಯಿ ಮತ್ತು ವೃದ್ಧೆಯೊಬ್ಬರು ವಾಸವಿದ್ದರು. ಈ ವೇಳೆ ಮನೆಗೆ ನುಗ್ಗಿ ಕೃತ್ಯ ಎಸಗಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್​, ಉಡುಪಿಯ ನೇಜಾರುವಿನ ತೃಪ್ತಿನಗರದಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆಗೈಯಲಾಗಿದೆ. ಈ ಸಂಬಂಧ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತದೆ. ನಾಲ್ವರನ್ನು ಕೊಲೆಗೈದು, ಮನೆಯ ಯಜಮಾನಿಯ ಅತ್ತೆಗೂ ಗಾಯಗೊಳಿಸಲಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮನೆಯ ಯಜಮಾನ ವಿದೇಶದಲ್ಲಿದ್ದು ಅವರನ್ನು‌ ಸಂಪರ್ಕಿಸುತ್ತೇವೆ. ಮನೆಯಲ್ಲಿ ಯಾವುದೇ ವಸ್ತು ಕಳವಾದ ಬಗ್ಗೆ ಸಾಕ್ಷ್ಯ ಸಿಕ್ಕಿಲ್ಲ. ಕೊಲೆಯ ಹಿಂದಿನ‌ ಕಾರಣ ತನಿಖೆಯ ಬಳಿಕ ತಿಳಿದುಬರಲಿದೆ ಎಂದು ತಿಳಿಸಿದರು.

Leave a Reply