Visitors have accessed this post 69 times.
ಕರ್ನಾಟಕದಲ್ಲಿ ನಕ್ಸಲ್ ಚಳುವಳಿ ಸಂಪೂರ್ಣ ನಿಂತು ಹೋಗಿರುವ ಈ ಸಂದರ್ಭ ಇದೀಗ ಕೇರಳದ ನಕ್ಸಲ್ ಚಟುವಟಿಕೆಯಿಂದಾಗಿ ಮತ್ತೆ ಸುದ್ದಿಯಲ್ಲಿದೆ. ಕಳೆದ ಒಂದು ವಾರದಿಂದ ಕೇರಳದಲ್ಲಿ ನಕ್ಸಲ್ ರು ಹಾಗೂ ಪೊಲೀಸರ ನಡುವೆ ಕಾಳಗ ನಡೆಯುತ್ತಿದೆ. ಇದೀಗ ಕರ್ನಾಟಕ ಗಡಿ ಸಮೀಪ ಇದ್ದ ನಕ್ಸಲ್ ತಂಡಕ್ಕೂ ಕೇರಳ ನಕ್ಸಲ್ ನಿಗ್ರಹ ಪಡೆಗೂ ತೀವ್ರತರವಾದ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಎಲ್ಲ ನಕ್ಸಲರೂ ಪರಾರಿಯಾಗಿದ್ದಾರೆ.
ಗಡಿಗ್ರಾಮ ಕುಟ್ಟಕ್ಕೆ ಕೆಲವೇ ಕಿ.ಮೀ ದೂರದಲ್ಲಿರುವ ಕೇರಳದ ಐಯಮ್ಮುನ್ ಎಂಬ ಸ್ಥಳದಲ್ಲಿ 9 ಮಂದಿಯ ನಕ್ಸಲ್ ತಂಡವು ಶಿಬಿರ ಹಾಕಿಕೊಂಡಿತ್ತು. ಕೂಂಬಿಂಗ್ ನಡೆಸುತ್ತಿದ್ದ ನಕ್ಸಲ್ ನಿಗ್ರಹ ಪಡೆಯು ಗುಂಡಿನ ದಾಳಿ ನಡೆಸಿತು. ಪ್ರತಿಯಾಗಿ ನಕ್ಸಲರ ತಂಡವೂ ತೀವ್ರವಾದ ಗುಂಡಿನ ಚಕಮಕಿ ನಡೆಸಿದೆ. ಈ ವೇಳೆ ಎಲ್ಲರೂ ಪರಾರಿಯಾಗಿದ್ದಾರೆ.
ಸ್ಥಳದಲ್ಲಿ ಎರಡು ರೈಫಲ್ಸ್ ಸಿಕ್ಕಿದ್ದು, ರಕ್ತದ ಕಲೆ ಪತ್ತೆಯಾಗಿವೆ. ಹೀಗಾಗಿ ಗುಂಡಿನ ಚಕಮಕಿಯಲ್ಲಿ ನಕ್ಸಲರು ಗಾಯಗೊಂಡಿರಬಹುದು ಎಂದು ಶಂಕಿಸಲಾಗಿದೆ. ಗಾಯಗೊಂಡಿರುವ ನಕ್ಸಲರು ಚಿಕಿತ್ಸೆ ಪಡೆಯಲು ಕರ್ನಾಟಕಕ್ಕೆ ನುಸುಳುವ ಶಂಕೆಯಿದೆ.
ಗಡಿ ಭಾಗದ ಎಲ್ಲಔಷಧ ಅಂಗಡಿಗಳ ಮೇಲೆ ನಿಗಾ ಇರಿಸಲಾಗಿದೆ. ರಾಜ್ಯ ನಕ್ಸಲ್ ನಿಗ್ರಹ ಪಡೆಯು ತೀವ್ರ ಕಟ್ಟೆಚ್ಚರ ವಹಿಸಿದೆ. ಕೂಂಬಿಂಗ್ ಅನ್ನು ಚುರುಕುಗೊಳಿಸಲಾಗಿದೆ.
ಗಡಿಗೆ ಸಮೀಪದಲ್ಲಿ ನಕ್ಸಲರೊಂದಿಗೆ ಭಾರಿ ಗುಂಡಿನ ಚಕಮಕಿ ನಡೆದ ಬೆನ್ನಲ್ಲೇ ರಾಜ್ಯ ನಕ್ಸಲ್ ನಿಗ್ರಹ ಪಡೆಯ ಹೆಚ್ಚುವರಿ ಸಿಬ್ಬಂದಿ ಬಂದಿದ್ದಾರೆ.
ಜಿಲ್ಲಾ ಪೊಲೀಸರು ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ಹಾಕಿಕೊಂಡು ತಪಾಸಣೆ ತೀವ್ರಗೊಳಿಸಿದ್ದಾರೆ. ವಿಶೇಷವಾಗಿ ಆಸ್ಪತ್ರೆಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ.