ಮಂಡ್ಯ: ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ಕಿಚ್ಚು ಇನ್ನೂ ಆರಿಲ್ಲ. ಈಗಲೂ ಕೆರಗೋಡು ಗ್ರಾಮದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ. ಕಳೆದ 1 ವಾರದಿಂದ ಕೆರಗೋಡು ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈ ಮಧ್ಯೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕೇಸರಿ ಶಾಲು ಹಾಕಿದ್ದರ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಕೆರಗೋಡು ಗ್ರಾಮದಲ್ಲಿ ಬಿಜೆಪಿ, ಜೆಡಿಎಸ್ ಜಂಟಿಯಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದವು. ಅಂದು ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಬಿಜೆಪಿ ನಾಯಕರೊಂದಿಗೆ ಭಾಗಿಯಾಗಿದ್ದರು. ಕೇಸರಿ ಶಾಲು ಧರಿಸಿ ಹೆಚ್ಡಿಕೆ ಭಾಷಣ ಮಾಡಿದ್ದರು. ಈ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಇನ್ನು, ಹೆಚ್.ಡಿ ಕುಮಾರಸ್ವಾಮಿ ಕೇಸರಿ ಶಾಲು ಹಾಕಬಾರ್ದಿತ್ತು. ಬಿಜೆಪಿ ಜೊತೆ ಹೋದ್ರೂ ನಮ್ಮ ಶಾಲನ್ನೇ ಹಾಕಬೇಕಿತ್ತು. ಅವರು ಅವರ ಶಾಲು ಹಾಕ್ತಾರೆ, ನಾವು ನಮ್ದು ಹಾಕ್ತೀವಿ ಎಂದು ಹೆಚ್ಡಿಕೆ ಕೇಸರಿ ಶಾಲು ಹಾಕಿದ್ದಕ್ಕೆ ದೇವೇಗೌಡರು ಅಸಮಾಧಾನ ಹೊರಹಾಕಿದ್ದಾರೆ.