ಕಾಂಗ್ರೆಸ್‌ನ ನಾಯಕರಿಗೆ ಹೈಕೋರ್ಟ್ ಶಾಕ್ – ಸಿಎಂ ಸೇರಿ ನಾಲ್ವರಿಗೆ ತಲಾ 10 ಸಾವಿರ ದಂಡ ವಿಧಿಸಿದ ಹೈಕೋರ್ಟ್

ಬೆಂಗಳೂರು : ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಆಗ ಸಚಿವರಾಗಿದ್ದ ಕೆ.ಎಸ್ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯ ಬಿಸಿ ಇದೀಗ ಪಕ್ಷಕ್ಕೆ ತಟ್ಟಿದೆ. ಆಗ ವಿಪಕ್ಷ ನಾಯಕರಾಗಿದ್ದ ಈಗಿನ ಸಿಎಂ ಸಿದ್ದರಾಮಯ್ಯ, ರಾಮಲಿಂಗ ರೆಡ್ಡಿ, ಎಂ.ಬಿ ಪಾಟೀಲ್, ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲ ಅವರಿಗೆ ಹೈಕೋರ್ಟ್ ತಲಾ ಹತ್ತು ಸಾವಿರ ದಂಡ ವಿಧಿಸಿದೆ. ಬೊಮ್ಮಾಯಿ ನೇತೃತ್ವದ ಬಿಜೆಪಿ ಅಧಿಕಾರದಲ್ಲಿದ್ದ ಸಮಯದಲ್ಲಿ ಉಡುಪಿಯಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಶರಣಾಗಿದ್ದ. ಇದರಲ್ಲಿ ಆಗಿನ ಸಚಿವ ಕೆ.ಎಸ್ ಈಶ್ವರಪ್ಪ ಹೆಸರು ಕೇಳಿಬಂದಿತ್ತು. ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತ್ತು. ಈ ವೇಳೆ ಪೊಲೀಸರು, ರಸ್ತೆ ತಡೆ ನಡೆಸಿ‌ ಸಾರ್ವಜನಿಕರಿಗೆ ತೊಂದರೆ‌ ಕೊಟ್ಟಿದ್ದು, ಕಾನೂನು ಸುವ್ಯಸ್ಥೆಗೆ ಭಂಗ ಉಂಟು ಮಾಡಿದ್ದು, ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಇತ್ಯಾದಿ ಆರೋಪಗಳಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ರದ್ದು ಕೋರಿ ಸಿದ್ದರಾಮಯ್ಯ, ರಾಮಲಿಂಗ ರೆಡ್ಡಿ, ಎಂ.ಬಿ ಪಾಟೀಲ್, ಸುರ್ಜೆವಾಲ ಹೈಕೋರ್ಟ್ ಮೊರೆ ಹೋಗಿದ್ದರು. ಇದರ ವಿಚಾರಣೆ ನಡೆಸಿದ ನ್ಯಾ. ಕೃಷ್ಣದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠವು ಅರ್ಜಿಗಳನ್ನು ವಜಾಗೊಳಿಸಿದೆ. ಅಲ್ಲದೆ ಸಂಬಂಧಪಡದ ಪೊಲೀಸ್ ಅಧಿಕಾರಿಯನ್ನು ಪ್ರತಿವಾದಿಯನ್ನಾಗಿ ಮಾಡಿದ್ದಕ್ಕೆ ಎಲ್ಲರಿಗೂ ತಲಾ 10 ಸಾವಿರ ರೂ. ದಂಡ ವಿಧಿಸಿದೆ. ಮಾರ್ಚ್ 6ರಂದು ಜನಪ್ರತಿನಿಧಿಗಳ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸಿಎಂ ಸಿದ್ದರಾಮಯ್ಯನವರಿಗೆ ಹೈಕೋರ್ಟ್ ಸೂಚಿಸಿದೆ. ಅದೇ ರೀತಿ ಮಾ.7ರಂದು ರಾಮಲಿಂಗ ರೆಡ್ಡಿ, ಮಾ.11 ಸುರ್ಜೆವಾಲಾ, ಮಾ.15ರಂದು ಎಂ.ಬಿ. ಪಾಟೀಲ್ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯದ ಮುಂದೆ ಹಾಜರಾಗಲು ಸೂಚಿಸಿದೆ.

Leave a Reply