Visitors have accessed this post 647 times.
ಬೆಂಗಳೂರು : ಕಳೆದ ಎರಡು ದಿನಗಳ ಹಿಂದೆ ಕೆಆರ್ ಪುರಂ ನ ಭೀಮಯ್ಯ ಲೇಔಟ್ ನಲ್ಲಿ ಊಟಕ್ಕೆ ಬಡಿಸಿಲ್ಲವೆಂದು ಮಗ ತಾಯಿಯನ್ನು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಿಗ್ ಟ್ರಸ್ಟ್ ಸಿಕ್ಕಿದ್ದು, ಮಹಿಳೆಯನ್ನು ಕೊಲೆಗೈದು ತಂದೆ ತನ್ನ ಮಗನ ಮೇಲೆ ಆ ಕೊಲೆ ಆರೋಪನ್ನು ಹೊರಿಸಿರುವುದು ಇದೀಗ ಬೆಳಕಿಗೆ ಬಂದಿದೆ.
ಮಹಿಳೆ ಹತ್ಯೆಯಾದ ದಿನ, ಮುಳುಬಾಗಿಲಿನಲ್ಲಿ ಓದುತ್ತಿದ್ದ ಆಕೆಯ ಹದಿನೇಳು ವರ್ಷದ ಮಗ ಮನೆಗೆ ಬಂದಿದ್ದ. ಆ ದಿನ ತಿಂಡಿ ಮಾಡಿಕೊಡುವ ವಿಚಾರಕ್ಕೆ ತಾಯಿ ಮತ್ತು ಮಗನ ನಡುವೆ ಜಗಳ ನಡೆಯುತ್ತಿತ್ತು. ಮೊದಲಿಗೆ ಅಪ್ತಾಪ್ತ ಮಗನೇ ದೊಣ್ಣೆಯಿಂದ ತಾಯಿಗೆ ಹಲ್ಲೆ ಮಾಡಿದ್ದಾನೆ. ಈ ವೇಳೆ ದೊಣ್ಣೆ ಕಿತ್ತುಕೊಂಡ ಚಂದ್ರಪ್ಪ ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ್ದು, ನೇತ್ರಾ ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಈ ವೇಳೆ ಪ್ಲ್ಯಾನ್ ಮಾಡಿದ ಚಂದ್ರಪ್ಪ, ನಿನಗೆ ಹದಿನೇಳು ವರ್ಷ, ಕೊಲೆ ಮಾಡಿದ್ರೂ ಜೈಲು ಶಿಕ್ಷೆ ಆಗಲ್ಲ. ನಾನೇ ಮಾಡಿದ್ದು ಎಂದು ಒಪ್ಪಿಕೊಳ್ಳುವಂತೆ ಹೇಳಿದ್ದ.
ಪೊಲೀಸರ ವಿಚಾರಣೆ ವೇಳೆ ಮಹಿಳೆ ನೇತ್ರಾಳ ಹತ್ಯೆ ವೇಳೆ ಆಕೆಯ ಪತಿ ಚಂದ್ರಪ್ಪ ಕೂಡ ಅದೇ ಮನೆಯಲ್ಲಿದ್ದ ಎಂಬುದು ತಿಳಿದು ಬಂದಿದೆ. ಬಳಿಕ ಪೊಲೀಸರು ಆತನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದು, ಈ ವೇಳೆ ಚಂದ್ರಪ್ಪನ ಮಾತಿನಿಂದ ಪೊಲೀಸರಿಗೆ ಅನುಮಾನ ಮೂಡಿದೆ. ಬಳಿಕ ತೀವ್ರ ವಿಚಾರಣೆ ನಡೆಸಿದಾಗ, ಕೊಲೆ ಮಾಡಿರುವುದು ಮಗನಲ್ಲ ನಾನೇ ಎಂದು ಚಂದ್ರಪ್ಪ ಒಪ್ಪಿಕೊಂಡಿದ್ದಾನೆ. ಚಂದ್ರಪ್ಪನಿಗೆ ಪತ್ನಿ ನೇತ್ರಾಳ ಶೀಲದ ಮೇಲೆ ಅನುಮಾನ ಇತ್ತು, ಇದೇ ವಿಚಾರಕ್ಕೆ ಸಾಕಷ್ಟು ಬಾರಿ ಜಗಳ ಸಹ ನಡೆದಿತ್ತು. ಇದೇ ಕಾರಣಕ್ಕೆ ಹತ್ಯೆಗೈದಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ತಂದೆಯ ಮಾತನ್ನು ಕೇಳಿ ಮಗ ಪೊಲೀಸರಿಗೆ ಕರೆ ಮಾಡಿ ತಾಯಿಯನ್ನು ಕೊಲೆ ಮಾಡಿದ್ದಾಗಿ ತಿಳಿಸಿದ್ದ. ಪೊಲೀಸರು ಯಾಕಪ್ಪ ಕೊಲೆ ಮಾಡಿದೆ ಎಂದು ವಿಚಾರಿಸಿದಾಗ, ಕಾಲೇಜ್‍ಗೆ ಹೋಗಲು ತಿಂಡಿ ಮಾಡಿ ಕೊಡು ಎಂದು ತಾಯಿಯ ಬಳಿ ಹೇಳಿದ್ದೆ. ತಾಯಿ ತಿಂಡಿ ಮಾಡಿಕೊಡದೆ, ಕೆಟ್ಟದಾಗಿ ನನ್ನನ್ನೇ ಬೈದಿದ್ದಕ್ಕಾಗಿ ಕೋಪದಲ್ಲಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿಬಿಟ್ಟೆ ಎಂದಿದ್ದ. ಇದೀಗ ಪೊಲಿಸರ ತನಿಖೆ ವೇಳೆ ಸತ್ಯ ಬಯಲಾಗಿದೆ.