ಪುತ್ತೂರು : ವಸತಿ ನಿಲಯದ ಅಡುಗೆ ಸಿಬ್ಬಂದಿ ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಮತ್ತು ಅವರ ವಿರುದ್ಧ ಸೂಕ್ತ ಕಾನೂನು ಕೈಗೊಳ್ಳಬೇಕೆಂದು ಆಗ್ರಹಿಸಿ ಈಶ್ವರಮಂಗಲದಲ್ಲಿರುವ ಮೆಟ್ರಿಕ್‌ಪೂರ್ವ ಪರಿಶಿಷ್ಟ ಪಂಗಡದ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳು ಸೋಮವಾರ ವಸತಿನಿಲಯದ ಎದುರು ಧರಣಿ ಪ್ರತಿಭಟನೆ ನಡೆಸಿದರು.
ಈಶ್ವರಮಂಗಲದ ವಿದ್ಯಾಸಂಸ್ಥೆಗಳಲ್ಲಿ ಕಲಿಯುತ್ತಿರುವ ವಸತಿ ನಿಲಯದ ವಿದ್ಯಾರ್ಥಿಗಳು ಸೋಮವಾರ ಮಧ್ಯಾಹ್ನ, ಅಡುಗೆ ಸಿಬ್ಬಂದಿಯಿಂದಾಗುತ್ತಿರುವ ದೌರ್ಜನ್ಯಗಳ ಕುರಿತು ವಸತಿ ನಿಲಯದ ಮೇಲ್ವಿಚಾರಕರಲ್ಲಿ ಮಾತನಾಡಲಿದೆ ಎಂದು ಶಾಲೆಯ ಶಿಕ್ಷಕರಲ್ಲಿ ತಿಳಿಸಿ ತೆರಳಿ ಧರಣಿ ಪ್ರತಿಭಟನೆ ಆರಂಭಿಸಿದರು. ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶಾರದಾ ಅವರು ವಿದ್ಯಾರ್ಥಿಗಳ ಬಳಿಗೆ ತೆರಳಿ ಮಾತುಕತೆ ನಡೆಸಿದರೂ ವಿದ್ಯಾರ್ಥಿಗಳು, ವಸತಿ ನಿಲಯದ ಮೇಲ್ವಿಚಾರಕರು ಇಲ್ಲವೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೇ ಇಲ್ಲಿಗೆ ಬಂದು ನಮಗಾಗುತ್ತಿರುವ ಸಮಸ್ಯೆಗಳನ್ನು ಆಲಿಸಬೇಕು, ಅವರು ಸ್ಥಳಕ್ಕೆ ಬಂದು ನ್ಯಾಯ ಒದಗಿಸಿದ ಬಳಿಕವೇ ನಾವು ಇಲ್ಲಿಂದ ತೆರಳುವುದು ಎಂದು ಪಟ್ಟು ಹಿಡಿದರು.
ವಸತಿ ನಿಲಯದ ಮೇಲ್ವಿಚಾರಕಿ ಅಕ್ಷತಾ ಪೈ ಅವರು ಸ್ಥಳಕ್ಕೆ ಬಂದಾಗ ವಿದ್ಯಾರ್ಥಿಗಳು ಅಡುಗೆ ಸಿಬ್ಬಂದಿಯಿಂದಾಗುತ್ತಿರುವ ದೌರ್ಜನ್ಯದ ಕುರಿತು ವಿವರಿಸಿ, ಅಡುಗೆ ಸಿಬ್ಬಂದಿಯನ್ನು ಬದಲಾಯಿಸಬೇಕೆಂದು ಪಟ್ಟು ಹಿಡಿದರು. ವಿದ್ಯಾರ್ಥಿಗಳಿಗೆ ತೊಂದರೆ ನೀಡದಂತೆ ಈಗಾಗಲೇ ಅವರಿಗೆ ಸೂಚಿಸಲಾಗಿದೆ. ನಿಮ್ಮ ಸಮಸ್ಯೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದರೂ ವಿದ್ಯಾರ್ಥಿಗಳು ಅವರ ಮಾತು ಕೇಳದೆ ಪ್ರತಿಭಟನೆ ಮುಂದುವರಿಸಿದರು.
ಈ ನಡುವೆ ಸ್ಥಳಕ್ಕೆ ಬಂದ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಮ ಮೇನಾಲ ಅವರು, ಮಕ್ಕಳ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗುತ್ತಿರುವ ಅಡುಗೆ ಸಿಬ್ಬಂದಿಯನ್ನು ಬದಲಾವಣೆ ಮಾಡಲು ಇಷ್ಟೊಂದು ಸಮಯ ಬೇಕೆ, ಗ್ರಾಮ ಪಂಚಾಯಿತಿಯಲ್ಲಿ ಕೈಗೊಂಡ ನಿರ್ಣಯಕ್ಕೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿ ವಸತಿ ನಿಲಯದ ಮೇಲ್ವಿಚಾರಕಿಯನ್ನು ತರಾಟೆಗೆ ತೆಗೆದುಕೊಂಡರು.