ಬೆಂಗಳೂರು: ಸ್ಪೀಕರ್ ಯು.ಟಿ ಖಾದರ್ ಅವರ ಪ್ರಯಾಣಕ್ಕೆ ಇದೀಗ ಹಲವು ವಿಶೇಷತರ ಹೊಂದಿರುವ ಐಷಾರಾಮಿ ಕಾರು ಬಂದಿದೆ.
ಸಚಿವಾಲಯದಿಂದ ವಿಶೇಷ ಕಾರಿನ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಐಷಾರಾಮಿ ಫಾರ್ಚೂನರ್ ಕಾರು ಹಲವು ವಿಶೇಷತೆಗಳನ್ನು ಹೊಂದಿದೆ.
ಐಶಾರಾಮಿ ಕಾರು, 360 ಡಿಗ್ರಿ ಕ್ಯಾಮೆರಾ ಹಾಗೂ ಪ್ರಯಾಣದ ಸಂದರ್ಭದಲ್ಲಿ ಸ್ಪೀಕರ್ ಖಾದರ್ ಮುಖಕ್ಕೆ ಬೆಳಕು ನೀಡುವ ವಿಶೇಷ ಎಲ್ ಇ ಡಿ ಲೈಟ್ ಸೌಲಭ್ಯ ಹೊಂದಿದೆ. ಕಪ್ಪು ಬಣ್ಣದ ಫಾರ್ಚೂನರ್(ಇ) ಕಾರಿನ ದರ 33.43 ಲಕ್ಷ (ಪೆಟ್ರೋಲ್ ಹಾಗೂ ಡೀಸೆಲ್ ಕಾರಿನ ದರ 35.93 ರಿಂದ 51.44 ಲಕ್ಷ ರೂ. ಆಗುತ್ತದೆ. ಆದರೆ, ಈ ಫಾರ್ಚೂನರ್ ಗೆ ವಿಶೇಷ ವಿನ್ಯಾಸ ಮಾಡಿರುವುದರಿಂದ ಒಟ್ಟು 41 ಲಕ್ಷ ರೂ. ವೆಚ್ಚವಾಗಿದೆ ಎಂದು ತಿಳಿದುಬಂದಿದೆ.
ಕಾರಿಗೆ ಜಿಆರ್ ಕಿಟ್ ಅಳವಡಿಸುವ ಮೂಲಕ ವಿಶೇಷ ವಿನ್ಯಾಸ ಮಾಡಲಾಗಿದೆ. ಇನ್ನು ಕಾರಿನ ಮುಂಭಾಗ ಹಾಗೂ ಹಿಂಭಾಗದಲ್ಲಿ ಗಂಡಭೇರುಂಡ ಲಾಂಛನ ಹೊಂದಿದೆ. ರಾಜ್ಯಪಾಲರಿಗೆ ಹೊರತಾಗಿ ಸ್ಪೀಕರ್ ಗೆ ಮಾತ್ರ ಇದನ್ನು ಹಾಕಲು ಅವಕಾಶ ಇದೆ. ಕೆಲ ವಾರಗಳ ಹಿಂದಷ್ಟೇ ರಾಜ್ಯ ಸರ್ಕಾರದ ಸಚಿವರ ಪ್ರಯಾಣಕ್ಕಾಗಿ 33 ಹೊಸ ಇನ್ನೊವಾ ಕ್ರಸ್ಟಾ ಹೈ ಬೀಡ್ ಕಾರನ್ನು ಖರೀದಿಸಲಾಗಿತ್ತು. ಸುಮಾರು 9.9 ಕೋಟಿ ರೂ. ವೆಚ್ಚದಲ್ಲಿ 33 ಸಚಿವರಿಗೆ ಹೊಸ ಕಾರು ಖರೀದಿ ಮಾಡಿ ನೀಡಲಾಗಿತ್ತು. ಪ್ರತಿಯೊಂದು ಇನ್ನೊವಾ ಹೈಬ್ರಿಡ್ ಎಸ್ ಯುವಿ ಕಾರಿಗೆ ತಲಾ ಸುಮಾರು 30 ಲಕ್ಷ ರೂ. ವೆಚ್ಚವಾಗಿತ್ತು ಎಂದು ತಿಳಿದುಬಂದಿದೆ.