August 30, 2025
WhatsApp Image 2024-02-14 at 9.20.39 AM

ಬೆಂಗಳೂರು : ಭಿಕ್ಷುಕನ ಯಡವಟ್ಟಿನಿಂದ ಎಲ್ಲರೂ ಒಂದು ಕ್ಷಣ ಉಸಿರು ಬಿಗಿ ಹಿಡಿಯುವಂತಾಗಿದ್ದು ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿತ್ತು. ಎಟಿಎಂ ಮಷೀನ್ ಬಳಿ ಭಿಕ್ಷುಕ ಇಟ್ಟು ಹೋದ ಬಾಕ್ಸ್​ನಿಂದ ಭಾರೀ ಸಮಸ್ಯೆ ಉದ್ಭವಿಸಿತ್ತು. ಫೆಬ್ರವರಿ 12 ರಂದು ಮಿನರ್ವ ಸರ್ಕಲ್ ಬಳಿ ನಡೆದಿದ್ದ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.

ಫೆಬ್ರವರಿ 12ರ ಬೆಳಿಗ್ಗೆ ಹತ್ತು ಘಂಟೆ ಸುಮಾರಿಗೆ ಮಿನರ್ವ ಸರ್ಕಲ್ ಬಳಿ ಭಿಕ್ಷುಕನೋರ್ವ ಕೋಟಕ್ ಮಹೇಂದ್ರ ಬ್ಯಾಂಕ್​ ಎಟಿಎಂನ ಪಕ್ಕದಲ್ಲಿ ಬಾಕ್ಸ್ ಇಟ್ಟು ಪರಾರಿಯಾಗಿದ್ದ. ಆ ಬಾಕ್ಸ್ ಗಳನ್ನು ಎಟಿಎಂ ಒಳಭಾಗದಲ್ಲಿ ಹಣವನ್ನು ತುಂಬಲು ಉಪಯೋಗ ಮಾಡಲಾಗುತ್ತೆ. ಇಂತಹ ಮೂರು ಬಾಕ್ಸ್​ಗಳನ್ನು ಇಟ್ಟು ಭಿಕ್ಷುಕ ಓಡಿ ಹೋಗಿದ್ದ. ಎಟಿಎಂ ಬಳಿ ಬಾಕ್ಸ್ ಇರುವುದನ್ನು ಗಮನಿಸಿದ ಸೆಕ್ಯೂರಿಟಿ ಗಾರ್ಡ್​ಗೆ ಅನುಮಾನ ಹುಟ್ಟಿಕೊಂಡಿತ್ತು. ಒಂದು ಕ್ಷಣ ಶಾಕ್​ಗೆ ಒಳಗಾಗಿದ್ದು ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಕರೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದರು.

ಎಟಿಎಂನಲ್ಲಿದ್ದ ಹಣವನ್ನು ಕಳ್ಳತನ ಮಾಡಿ ಬಾಕ್ಸ್ ಇಟ್ಟಿರಬೇಕು. ಅಥವಾ ಬಾಕ್ಸ್‌ನಲ್ಲಿ ಏನಾದರೂ ಅನುಮಾನಾಸ್ಪದ ವಸ್ತುಗಳು ಇದೆಯಾ ಎಂಬ ಭಯ ಕಾಡಿತ್ತು, ಇದರಿಂದ ಫುಲ್ ಅಲರ್ಟ್ ಆದ ಪೊಲೀಸರು ಏರಿಯಾ ತುಂಬ ಹೈ ಅಲರ್ಟ್ ಮಾಡಿದರು. ಬಾಂಬ್ ನಿಷ್ಕ್ರಿಯ ದಳ ಬಂದ ನಂತರ ಅಲ್ಲಿ ಏನು ಇಲ್ಲ ಎಂಬುವುದು ಪತ್ತೆಯಾಗಿದೆ. ಬಾಕ್ಸ್​ನಲ್ಲಿ ಏನೂ ಇಲ್ಲ. ಅವು ಖಾಲಿಯಾಗಿವೆ ಎಂಬ ಮಾಹಿತಿ ಗೊತ್ತಾಗುತ್ತಿದ್ದಂತೆ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ.

ಇನ್ನು ಬೇರೊಂದು ಎಟಿಎಂ ಬಾಕ್​ನಲ್ಲಿದ್ದ ಬಾಕ್​ಗಳನ್ನು ಇಲ್ಲಿ ತಂದಿಟ್ಟಿದ್ದಾನೆಂದು ಅನುಮಾನ ವ್ಯಕ್ತವಾಗಿದೆ. ಸಿಸಿಟಿವಿಯಲ್ಲಿ ಭಿಕ್ಷುಕನ ಚಲನವಲನ ಪತ್ತೆಯಾಗಿದೆ. ಸದ್ಯ ಹಣ ತುಂಬುವ ಬಾಕ್ಸ್‌ ಎಲ್ಲಿಂದ ಬಂತು ಎಂಬುವುದೇ ಯಕ್ಷಪ್ರಶ್ನೆಯಾಗಿದೆ. ಸದ್ಯ ಪೊಲೀಸರು ಭಿಕ್ಷುಕನಿಗಾಗಿ ಹುಡುಕಾಡುತ್ತಿದ್ದು ತನಿಕೆ ಮುಂದುವರೆದಿದೆ. ಕಲಾಸಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

About The Author

Leave a Reply