Visitors have accessed this post 300 times.

“ದಕ್ಷಿಣ ಕನ್ನಡದ ತೆರಿಗೆ ಮುಸ್ಲಿಮರ ಮನೆಗೆ” ಎಂಬ ವಿವಾದಾತ್ಮಕ ಪೋಸ್ಟರ್ ಪ್ರದರ್ಶನ ಮಾಡಿದ ಹರೀಶ್ ಪೂಂಜಾ ಜನಪ್ರತಿನಿಧಿಯಾಗಲು ನಾಲಾಯಕ್: ಎಸ್‌ಡಿಪಿಐ ಆಕ್ರೋಶ

Visitors have accessed this post 300 times.

ಬೆಳ್ತಂಗಡಿ : ಬಜೆಟ್ ಮಂಡನೆಯ ವಿಚಾರವಾಗಿ ಬಿಜೆಪಿ ಇಂದು ವಿಧಾನಸೌಧದ ಹೊರಗೆ ಪ್ರತಿಭಟನೆಯ ಸಂದರ್ಭದಲ್ಲಿ ಬೆಳ್ತಂಗಡಿ ಕ್ಷೇತ್ರ ಶಾಸಕ ಹರೀಶ್ ಪೂಂಜ “ದಕ್ಷಿಣ ಕನ್ನಡದ ತೆರಿಗೆ ಮುಸ್ಲಿಮರ ಮನೆಗೆ” ವಿವಾದಾತ್ಮಕ ಪೋಸ್ಟರ್ ಪ್ರದರ್ಶನವು ಸಂವಿಧಾನ ಬಾಹಿರವಾಗಿದೆ. ಇಂತಹ ಕೋಮುವಾದಿ ಮನಸ್ಥಿತಿಯವರು ಜನಪ್ರತಿನಿಧಿಯಾಗಲು ನಾಲಾಯಾಕ್ ಎಂದು SDPI ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿರುವ ಅವರು ನಮ್ಮ ತೆರಿಗೆ ನಮ್ಮ ಹಕ್ಕು, ನಮ್ಮ ತೆರಿಗೆ ನಮಗೆ ಕೊಡಿ. ದಕ್ಷಿಣ ಕನ್ನಡದ ತೆರಿಗೆ ದಕ್ಷಿಣ ಕನ್ನಡಕ್ಕೆ ನೀಡಿ. ದಕ್ಷಿಣ ಕನ್ನಡದ ತೆರಿಗೆ ಮುಸ್ಲಿಮರ ಮನೆಗೆ’ ಎಂಬ ವಿಚಾರ ಇಟ್ಟುಕೊಂಡು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ವಿಧಾನಸೌಧದ ಮುಂಭಾಗದಲ್ಲಿ ಇಂತಹ ಕೋಮು ಭಾವನೆ ಕೆರಳಿಸುವ ಪೋಸ್ಟರ್ ಪ್ರದರ್ಶಿಸಿದ್ದು ಖಂಡನೀಯ. ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳಿಂದ ಪ್ರಸಿದ್ಧಿ ಪಡೆದಿರುವ ಶಾಸಕರು ಕೋಮು ಹೇಳಿಕೆಗಳಿಂದ ಕುಪ್ರಸಿದ್ದಿ ಪಡೆದಿರುವ ಹರಕಲು ಬಾಯಿ ಈಶ್ವರಪ್ಪ ಹಾಗೂ ಸಿಟಿ ರವಿಯನ್ನು ಓವರ್‌ಟೇಕ್ ಮಾಡುವ ಯೋಜನೆಯಲ್ಲಿ ಇದ್ದಾರೆಂದು ವ್ಯಂಗ್ಯವಾಡಿದ್ದಾರೆ.

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಕಡೆಯು ಬಿಜೆಪಿ ನಾಯಕರು ಕೋಮು ಭಾವನೆ ಕೆರಳಿಸಿ ಗಲಭೆ ನಡೆಸುವ ಹುನ್ನಾರ ನಡೆಸುತ್ತಿದ್ದಾರೆ. ದಕ್ಷಿಣ ಕನ್ನಡದಲ್ಲಿ ಅದರ ಏಜೆಂಟ್‌ಗಳಾಗಿ ಸ್ವತಃ ಬಿಜೆಪಿ ಶಾಸಕರುಗಳೆ ಕೋಮು ದ್ವೇಷವನ್ನು ಹರಡಿ ಮುಂಬರುವ ಚುನಾವಣೆಯಲ್ಲಿ ಅದರ ಲಾಭ ಪಡೆಯುವ ದುಷ್ಟ ಯೋಜನೆ ಹೊಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ‌. ಕೆಲವು ದಿನಗಳ ಹಿಂದೆ ಮಂಗಳೂರಿನ ಖಾಸಗಿ ಶಾಲೆಯಲ್ಲಿ ಇದೇ ರೀತಿ ಮಂಗಳೂರು ಕ್ಷೇತ್ರ ಶಾಸಕರು ಶಾಲಾ ಶಿಕ್ಷಕರನ್ನು ನಿಂದಿಸಿದ್ದು ಈಗಾಗಲೇ ಎಲ್ಲಾ ಮಾಧ್ಯಮದಲ್ಲಿ ಬಂದಿದೆ. ಇದಕ್ಕೆ ಪೂರಕ ಎಂಬಂತೆ ಬೆಳ್ತಂಗಡಿ ಶಾಸಕರು ಜಿಲ್ಲೆಯಲ್ಲಿ ಶಾಂತಿ ಕದಡುವ ಕೆಲಸಕ್ಕೆ ಕೈ ಹಾಕಿ ಶಾಂತಿ ಸುವ್ಯವಸ್ಥೆ ಹದಗೆಡಲು ಪಣತೊಟ್ಟವರಂತೆ ವರ್ತಿಸುತ್ತಿದ್ದಾರೆ.

ರಾಜ್ಯ ಸರ್ಕಾರ ಇಂತಹ ಶಾಸಕರ ವಿರುದ್ಧ ಮೃದು ಧೋರಣೆ ತೋರುತ್ತಿರುವ ಕಾರಣದಿಂದಲೇ ನಿರಂತರವಾಗಿ ಇದನ್ನು ಮುಂದುವರಿಸಿಕೊಂಡು ಬಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ ಹಾಗೂ ಇವರ ವಿರುದ್ಧ ಸರ್ಕಾರ ಕಾನೂನು ಕ್ರಮ ಜರುಗಿಸಬೇಕೆಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *