
ಕಾಸರಗೋಡು: ಬಸ್ಸು ಚಲಾಯಿಸುತ್ತಿದ್ದಾಗಲೇ ಚಾಲಕರೋರ್ವ ಹೃದಯಘಾತದಿಂದ ಮೃತಪಟ್ಟ ಘಟನೆ ಚೇವಾರ್ ಸಮೀಪದ ಕುಂಟಗೇರಡ್ಕದಲ್ಲಿ ನಡೆದಿದೆ.ಚೇವಾರ್ ಕುಂಟಗೇರಡ್ಕ ದ ಅಬ್ದುಲ್ ರಹಮಾನ್ (42) ಮೃತ ಪಟ್ಟವರು.



ಧರ್ಮತ್ತಡ್ಕ – ಕಾಸರಗೋಡು ರಸ್ತೆಯಲ್ಲಿ ಸಂಚರಿಸುವ ಗಝಲ್ ಬಸ್ಸು ಚಾಲಕರಾಗಿದ್ದರು. ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ಘಟನೆ ನಡೆದಿದೆ.
ಪೆರ್ಮುದೆ ಜಂಕ್ಷನ್ ಗೆ ಬಸ್ಸು ತಲಪಿದಾಗ ಚಾಲಕನಿಗೆ ಎದೆ ನೋವು ಕಾಣಿಸಿ ಕೊಂಡಿದೆ. ಬಸ್ಸಿನಿಂದ ಇಳಿದು ಸಮೀಪದ ಅಂಗಡಿಯಿಂದ ನೀರು ಕುಡಿದಿದ್ದರು.ಬಳಿಕ ಬಸ್ಸು ಚಲಾಯಿಸಿಕೊಂಡು ಬಂದಿದ್ದಾರೆ. ಸುಮಾರು ಮೂರು ಕಿಲೋ ಮೀಟರ್ ತನಕ ಬಸ್ಸು ಚಲಾಯಿಸಿ ಕೊಂಡು ಬಂದಿದ್ದು, ಚೇವಾರ್ ಕುಂಟಗೇರಡ್ಕ ಸ್ಟಾಪ್ ತಲಪಿದಾಗ ಪ್ರಯಾಣಿಕರನ್ನು ಇಳಿಸಲು ನಿಲ್ಲಿಸಿದ ಬಸ್ಸು ಕೆಲ ನಿಮಿಷ ವಾದರೂ ಮುಂದಕ್ಕೆ ಸಾಗದಿದ್ದುದರಿಂದ ಗಮನಿಸಿದಾಗ ಸ್ಟಿಯರಿಂಗ್ ಮೇಲೆ ತಲೆ ಇಟ್ಟು ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆದರೆ ಚಾಲಕ ಬಸ್ಸು ನಿಲ್ಲಿಸಿದರಿಂದ ಭಾರೀ ದುರಂತ ತಪ್ಪಿದೆ ಎನ್ನಬಹುದು.
ಬಸ್ಸು ಸ್ಟಾರ್ಟ್ ನಲ್ಲಿತ್ತು. ಪ್ರಯಾಣಿಕರು ಹಾಗೂ ನಾಗರಿಕರು ಕೂಡಲೇ ಬಂದ್ಯೋಡಿನ ಆಸ್ಪತ್ರೆಗೆ ತಲಪಿಸಿದರೂ ಆಗಲೇ ಮೃತ ಪಟ್ಟಿದ್ದರು. ಘಟನೆ ನಡೆದಾಗ ಬಸ್ಸಿನಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ 30 ಕ್ಕೂ ಅಧಿಕ ಪ್ರಯಾಣಿಕರಿದ್ದರು. ಅಬ್ದುಲ್ ರಹಮಾನ್ ಕಳೆದ ಕೆಲ ವರ್ಷಗಳಿಂದ ಬಸ್ಸು ಚಾಲಕರಾಗಿ ದುಡಿಯುತ್ತಿದ್ದರು.