ಯುವ ಕ್ರಿಕೆಟಿಗ ಹೃದಯಘಾತಕ್ಕೆ ಬಲಿ- ಸಚಿವ ದಿನೇಶ್ ಗುಂಡೂರಾವ್ ಸಂತಾಪ

ಕರ್ನಾಟಕದ ಉದಯೋನ್ಮುಖ ಕ್ರಿಕೆಟಿಗನೊಬ್ಬ ಹೃದಯಘಾತಕ್ಕೆ (Heart Attack ) ಬಲಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೆ. ಹೊಯ್ಸಳ (K. Hoysala) ಹೃದಯಘಾತಕ್ಕೆ ಬಲಿಯಾದ ದುರ್ದೈವಿ ಯುವ ಕ್ರಿಕೆಟಿಗರಾಗಿದ್ದಾರೆ. ವರದಿ ಪ್ರಕಾರ ಪ್ರಸ್ತುತ ನಡೆಯುತ್ತಿರುವ ಏಜಿಸ್ ಸೌತ್ ಝೋನ್ ಟೂರ್ನಿಯಲ್ಲಿ ಕರ್ನಾಟಕ ಹಾಗೂ ತಮಿಳುನಾಡು (Karnataka vs Tamilnadu) ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ತಮಿಳುನಾಡು ತಂಡವನ್ನು ಮಣಿಸುವಲ್ಲಿ ಕರ್ನಾಟಕ ಯಶಸ್ವಿಯಾಗಿತ್ತು. ಈ ವೇಳೆ ತಂಡದೊಂದಿಗೆ ಸಂಭ್ರಮಾಚರಣೆ ಮಾಡಿದ್ದ ಹೊಯ್ಸಳಗೆ ಮೈದಾನದಲ್ಲೇ ಎದೆಯಲ್ಲಿ ನೋವು ಕಾಣಿಸಿಕೊಂಡು ಪ್ರಜ್ಞೆ ತಪ್ಪಿದ್ದಾರೆ. ಬಳಿಕ ಆಂಬ್ಯುಲೆನ್ಸ್ ಮೂಲಕ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಅವರನ್ನು ಕರೆದೊಯ್ಯಲಾಗಿದೆ. ಆದರೆ ಆಸ್ಪತ್ರೆಗೆ ತಲುಪುವಷ್ಟರಲೇ ಹೊಯ್ಸಳ ಅವರ ಪ್ರಾಣಪಕ್ಷಿ ಹಾರಿ ಹೋಗಿದೆ. ಫೆಬ್ರವರಿ 22 ನೇ ಗುರುವಾರದಂದು ಈ ಘಟನೆ ನಡೆದಿದ್ದು, ಫೆಬ್ರವರಿ 23 ರ ಸಂಜೆಯಂದು ಬೆಳಕಿಗೆ ಬಂದಿದೆ.

ಸಂತಾಪ ಸೂಚಿಸಿದ ಆರೋಗ್ಯ ಸಚಿವರು ಯುವ ಕ್ರಿಕೆಟಿಗನ ಅಕಾಲಿಕ ಮರಣಕ್ಕೆ ಸಂತಾಪ ಸೂಚಿಸಿರುವ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು, ‘ಕರ್ನಾಟಕದ ಉದಯೋನ್ಮುಖ ಕ್ರಿಕೆಟಿಗನ ನಿಧನದ ಬಗ್ಗೆ ಕೇಳಿ ದುಃಖವಾಗುತ್ತಿದೆ. ವೇಗದ ಬೌಲರ್ ಹೊಯ್ಸಳ ಏಜಿಸ್ ದಕ್ಷಿಣ ವಲಯ ಪಂದ್ಯಾವಳಿಯ ವೇಳೆ ಹೃದಯಘಾತದಿಂದ ನಿಧನರಾಗಿದ್ದಾರೆ. ಅವರ ಸ್ನೇಹಿತರು ಮತ್ತು ಕುಟುಂಬಕ್ಕೆ ನನ್ನ ಸಂತಾಪಗಳು. ಇತ್ತೀಚಿನ ದಿನಗಳಲ್ಲಿ ಯುವಕರು ಹೃದಯಘಾತಕ್ಕೆ ಬಲಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಯುವಕರು ಹೃದಯ ಸ್ತಂಭನಕ್ಕೆ ಬಲಿಯಾಗುತ್ತಿರುವ ಇತ್ತೀಚಿನ ಘಟನೆಗಳು ಆರೋಗ್ಯ ಜಾಗೃತಿಯ ಮಹತ್ವವನ್ನು ಒತ್ತಿಹೇಳುತ್ತವೆ. ಹೀಗಾಗಿ ಹೃದಯದ ಆರೋಗ್ಯದ ಬಗ್ಗೆ ನಾವು ಜಾಗರೂಕರಾಗಿರಬೇಕು ಎಂದು ಬರೆದುಕೊಂಡಿದ್ದಾರೆ.

Leave a Reply