ಮಂಗಳೂರು: 2024ರ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ದಿನದಿಂದ ಎ. 3ರ ವರೆಗೆ ಜಿಲ್ಲೆಯಲ್ಲಿ 1.95 ಕೋಟಿ ರೂ. ಮೌಲ್ಯದ 90.4 ಸಾವಿರ ಲೀಟರ್ ಮದ್ಯವನ್ನು ಜಪ್ತಿ ಮಾಡಲಾಗಿದೆ. ಹಾಗೂ 8.69 ಲಕ್ಷ ರೂ. ಮೌಲ್ಯದ 15.5 ಕೆ.ಜಿ. ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ನಿಯಮ ಉಲ್ಲಂಘನೆ ಸೇರಿದಂತೆ ಒಟ್ಟು 278 ಎಫ್‌ಐಆರ್ ದಾಖಲಾಗಿದೆ. ದೂರವಾಣಿ ಮೂಲಕ 157 ಸಾರ್ವಜನಿಕರಿಂದ ಮಾಹಿತಿ ಸ್ವೀಕರಿಸಿ ವಿಲೇವಾರಿ ಮಾಡಲಾಗಿದೆ. ಸಿ-ವಿಸಿಲ್ ಆ್ಯಪ್ ಮೂಲಕ 59 ದೂರುಗಳು ಸ್ವೀಕೃತಗೊಂಡಿದ್ದು ಎಲ್ಲ ದೂರುಗಳನ್ನು ವಿಲೇವಾರಿ ಮಾಡಲಾಗಿದೆ. ಎನ್‌ಜಿಆರ್‌ಎಸ್ ಪೋರ್ಟಲ್ (ರಾಷ್ಟ್ರೀಯ ಕುಂದು ಕೊರತೆಗಳ ಪರಿಹಾರ ವ್ಯವಸ್ಥೆ) ಮೂಲಕ ಜಿಲ್ಲೆಯಲ್ಲಿ ಒಟ್ಟು 92 ದೂರುಗಳು ಸ್ವೀಕೃತಗೊಂಡಿವೆ. ಹಾಗೂ 90 ದೂರುಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.