Visitors have accessed this post 233 times.

ಹೋರಾಟಗಾರರಿಗೆ “ಅಂಬೇಡ್ಕರ” ಭಾಷಣ ಮತ್ತು ಬರಹಗಳು ಉತ್ತೇಜನಕಾರಿಯಾಗಿದೆ-ಆಮಿರ್ ಅಶ್ಅರೀ, ಬನ್ನೂರು

Visitors have accessed this post 233 times.

ಭಾರತೀಯ ಮತ್ತು ಪ್ರಪಂಚದಾದ್ಯಂತ ನಾಗರಿಕರ ಮನಸ್ಸಿನಲ್ಲಿ ಸಾರ್ವಕಾಲಿಕ ತನ್ನ ಅಸ್ತಿತ್ವ ಸ್ಥಾಪಿಸಿದ ಮಹಾನ್ ವ್ಯಕ್ತಿ ಸಾಹೇಬ್ ಅಂಬೇಡ್ಕರ್.ಹುಟ್ಟು ಅವಮಾನದಿಂದಾದರೂ, ಸಾವು ಕ್ರಾಂತಿ ಮತ್ತು ಸನ್ಮಾನದಿಂದ ಅನುಭವಿಸಿದ ಹೆಗ್ಗಳಿಕೆ ಅಂಬೇಡ್ಕರದ್ದು, ವಸಾಹತುಶಾಹಿ ವಿರುದ್ಧ ಮತ್ತು ಭಾರತೀಯ ಸಮಾಜದ ಕಲ್ಯಾಣಕ್ಕಾಗಿ ಅವರು ನಡೆಸಿದ ಹೋರಾಟಗಳು ಭಾರತೀಯ ಸುವರ್ಣಾಕ್ಷರಗಳಲ್ಲಿ ದಾಖಲಿದೆ.
ಮಧ್ಯಪ್ರದೇಶದ ಮೊವ್ ಆರ್ಮಿ ಕಂಟೋನ್ಮೆಂಟ್‌ನಲ್ಲಿ ದಲಿತ ಸಮುದಾಯದ ಕುಟುಂಬದಲ್ಲಿ ಜನಿಸಿದ ಅವರು ಕೆಳಮಟ್ಟದ ಜಾತಿಯಲ್ಲಿ ಹುಟ್ಟಿದ ಕಾರಣಕ್ಕಾಗಿ ಎದುರಿಸಬೇಕಾಗಿ ಬಂದ ಅವಮಾನ, ಅಪಮಾನ, ತಾರತಮ್ಯ ಮತ್ತು ಅಸ್ಪೃಶ್ಯತೆಯೂ ಹಾಗೂ ಮಾನವ ಜೀವನದಲ್ಲಿ ಮುಖ್ಯವಾಗಿ ಇರಬೇಕಾದ ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಮತ್ತು ನ್ಯಾಯದ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿಯನ್ನು ಮೂಡಿಸಬೇಕೆಂಬ ಕಾರಣಕ್ಕಾಗಿ ಎಲ್ಲಾ ಸಾಮಾಜಿಕ ಪಿಡುಗುಗಳಲ್ಲಿ ವಿರುದ್ಧದ ಹೋರಾಟಗಳಲ್ಲಿ ಅಂಬೇಡ್ಕರ್ ಪಾತ್ರ ಸಂಕೀರ್ಣವಾಗಿತ್ತು.
ಜಾತಿ ಅಥವಾ ಇನ್ನಿತರ ಕಾರಣಕ್ಕಾಗಿ ಸಮಾಜವು ಹತ್ತಿಕ್ಕಲಾಗುತ್ತಿದ್ದ ಸಮುದಾಯದ ರಕ್ಷಣೆಗಾಗಿ ಮುಂಚೂಣಿಯಲ್ಲಿರುತ್ತಿದ್ದ ಅಂಬೇಡ್ಕರ್ ಅವರು ಈ ಹೋರಾಟವನ್ನು ತನ್ನ ಜನಾಂಗ ಅಥವಾ ಸಮುದಾಯದಕ್ಕೆ ಸೀಮಿತಗೊಳಿಸದೆ ಪ್ರತಿಯೊಬ್ಬರ ಪಾಲಿಗೂ ಹೋರಾಡುತ್ತಾ, ಎಲ್ಲಾ ನಾಗರಿಕರ ನ್ಯಾಯಕ್ಕಾಗಿ ಮತ್ತು ಸಬಲೀಕರಣದಲ್ಲೂ ಅಂಬೇಡ್ಕರ್ ಅವರ ಪಾತ್ರ ಬಹುದೊಡ್ಡದಿದೆ. ಅದರಲ್ಲೂ ಮಹಿಳೆಯರ, ಮಕ್ಕಳ ಹಾಗೂ ರೈತರ ನ್ಯಾಯಕ್ಕಾಗಿ ತಪಸ್ಸು ಕೂತು ಹೋರಾಟ ನಡೆಸಿದವರಾಗಿದ್ದಾರೆ. ಅಂಬೇಡ್ಕರ್ ಅವರ ಪ್ರತಿಯೊಂದು ಹೋರಾಟಗಳು ಅಥವಾ ಅವರ ನಾಯಕತ್ವದಲ್ಲಿ ರೂಪುಗೊಂಡಿರುವ ಭಾರತದ ಸಂವಿಧಾನ ಇವೆಲ್ಲವೂ ಕೂಡ ಜ್ಞಾನ ಮತ್ತು ವಿದ್ಯೆ ಮೇಲೆ ಅವಲಂಬಿತವಾಗಿದೆ. ಶಿಕ್ಷಣದ ಮೇಲೆ ಅಪಾರವಾದ ಹಿಡಿತವನ್ನು ಹೊಂದಿದ್ದ ಕಾರಣಕ್ಕೆ ಅಂಬೇಡ್ಕರ್ ಅವರು ಸಂವಿಧಾನ ಬರೆಯುವಲ್ಲಿ ಯಶಸ್ವಿಯಾದರು. ಅದೇ ಸಂವಿಧಾನವನ್ನು ಭಾರತದಲ್ಲಿ ನಾವು ಉಳಿಸಬೇಕಾದರೆ ಆಧುನಿಕ ವಿದ್ಯಾಭ್ಯಾಸ ವ್ಯವಸ್ಥೆಯಲ್ಲಿ ಸಂವಿಧಾನದ ಮೌಲ್ಯ ಮತ್ತು ಉದ್ದೇಶಗಳು ಹಾಗೂ ಅದರ ಅಗತ್ಯತೆಗಳ ಬಗ್ಗೆ ಮುಂದಿನ ವಿದ್ಯಾರ್ಥಿ ತಲೆಮಾರಿಗೆ ತಲುಪಿಸುವಂತಹ ಕೆಲಸವನ್ನು ಶಾಲಾ-ಕಾಲೇಜುಗಳಿಂದಲೇ ಮಾಡಬೇಕಾಗುತ್ತದೆ. ಜ್ಞಾನದಿಂದಲೇ ನಿರ್ಮಿತವಾದ ಸಂವಿಧಾನ, ಅದರ ಉಳಿವು ಕೂಡ ವಿದ್ಯೆಯಿಂದಲೇ ಮಾತ್ರ ಸಾಧ್ಯ. ಅಸ್ಪೃಶ್ಯತೆಯಂತಹ ಸಾಮಾಜಿಕ ಪಿಡುಗುಗಳನ್ನು ಕಟ್ಟಿ ಹಾಕಲು ಶಿಕ್ಷಣವೇ ಒಂದು ಅಸ್ತ್ರವೆಂದು ಬಲವಂತವಾಗಿ ನಂಬಿಕೊಂಡಿದ್ದ ಅವರು, ಶಿಕ್ಷಣದಿಂದ ವಂಚಿತರಾದವರಿಗೆ ಶಿಕ್ಷಣದ ಬಗ್ಗೆ ಜಾಗೃತಿಯನ್ನು ನೀಡಿ, ಅವರನ್ನು ವಿದ್ಯಾವಂತರನ್ನಾಗಿಸಿ, ತಾವಾಗಿ ಅವರ ಸಾಮಾಜಿಕ ಸ್ಥಿತಿ, ಆರ್ಥಿಕ ಸುಧಾರಣೆ ಮತ್ತು ರಾಜಕೀಯ ಸ್ವಾತಂತ್ರ್ಯ ಕಂಡುಕೊಳ್ಳುವ ತನಕ ಅವರ ಬೆಂಬಲವಿರುತ್ತಿತ್ತು. ಶಿಕ್ಷಣದಿಂದಲೇ ದೇಶದ ಪ್ರಗತಿ ಸಾಧ್ಯವೆಂದರೆ ಅಂಬೇಡ್ಕರ್ ಅವರು ತಾನು ರಚಿಸಿರುವ ಸಂವಿಧಾನದಲ್ಲಿ ಭಾರತದ ಪ್ರತಿಯೊಬ್ಬ ಪ್ರಜೆಗೂ ನೀಡಿರುವಂತಹ ಹಕ್ಕುಗಳಲ್ಲಿ ಶಿಕ್ಷಣವನ್ನು ಪ್ರತ್ಯೇಕವಾಗಿ ಪರಿಗಣಿಸಿ ಪ್ರಜೆಯ ಮೂಲಭೂತ ಹಕ್ಕಾಗಿ ನೀಡಿದ್ದಾರೆ. “ಶಿಕ್ಷಣದಿಂದ ಯಾರನ್ನೂ ಸಹ ವಂಚಿತರನ್ನಾಗಿ ಮಾಡಬಾರದು, ಇದು ಈ ದೇಶದ ಎಲ್ಲಾ ಜನರನ್ನು ತಲುಪಬೇಕು ಮತ್ತು ಶೋಷಿತ ವರ್ಗದವರು ಅದನ್ನು ಕನಿಷ್ಠ ವೆಚ್ಚದಲ್ಲಿ ಪಡೆಯುವಂತಿರಬೇಕು.’’ ಎಂದು ಹೇಳುತ್ತಿದ್ದರು.
ಅಂಬೇಡ್ಕರ್ ಅವರ ಹುಟ್ಟು ಭಾರತದಲ್ಲಾದರೆ ಅವರ ಜ್ಞಾನ ಮತ್ತು ತಿಳುವಳಿಕೆಯ ಪರಿಶ್ರಮದಿಂದ ಅಖಂಡ ಜಗತ್ತನ್ನ ತಲುಪುವಲ್ಲಿ ಯಶಸ್ಸಾಗಿದ್ದಾರೆಂದು ಹೆಮ್ಮೆಯಿಂದ ಭಾರತೀಯರು ಹೇಳಿಕೊಳ್ಳಲೇಬೇಕು. ಎಲ್ಲಾ ಹಂತಗಳಲ್ಲೂ ಶ್ರೀಮಂತ ಗೊಂಡಿರುವ ರಾಷ್ಟ್ರಗಳಲ್ಲಿ ಇಲ್ಲದೇ ಹೋಗಿರುವ ಒಂದು ಈ ಭಾರತದಲ್ಲಿದೆ ಅದುವೇ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನ.
ಇದೇಕಾರಣಕ್ಕಾಗಿರಬಹುದೇನೋ ಪ್ರಪಂಚದ ಎಷ್ಟೋ ದೇಶಗಳಲ್ಲಿ ಅವರ ಜೀವನದ ಕುರಿತು ಅಧ್ಯಯನಗಳನ್ನು, ಅಧ್ಯಯನ ಕೇಂದ್ರಗಳನ್ನು ಹೆಚ್ಚೆಂದರೆ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿ, ಅವರ ಬದುಕು ಜಗತ್ತಿಗೆ ಆದರ್ಶವೆಂದು ತೋರಿಸಿಕೊಡುತ್ತಿದ್ದಾರೆ. ಶೋಷಿತರ, ನಿರ್ಗತಿಕರ ಮತ್ತು ಅವಕಾಶ ವಂಚಿತರ ಪಾಲಿಗೆ ನ್ಯಾಯ ಒದಗಿಸಲು ಹೋರಾಟದ ದಾರಿ ಹಿಡಿಯುವ ಹೋರಾಟಗಾರರಿಗೆ ಅಂಬೇಡ್ಕರ್ ಅವರು ನಡೆಸಿರುವ ಭಾಷಣಗಳು ಮತ್ತು ಬರಹಗಳು ಉತ್ತೇಜನಕಾರಿಯಾಗಿದೆ.
ಕೊನೆಯದಾಗಿ ಹೇಳಬಲ್ಲೆ ಎಲ್ಲಾ ಸಮುದಾಯಗಳಿಗೂ ಓರ್ವ ಅಥವಾ ಅದಕ್ಕಿಂತಲೂ ಹೆಚ್ಚು ಅನುಕರಿಸಲ್ಪಡುವ ನಾಯಕನಿರುವುದು ಸಾಮಾನ್ಯ. ಭಾರತೀಯ ದಲಿತ ಸಮುದಾಯವು ಅಂಬೇಡ್ಕರ್ ಅವರನ್ನು ಅವಲಂಬಿಸಿ ಬದುಕನ್ನು ಕಟ್ಟಿಕೊಳ್ಳುತ್ತಿರುವುದು ಜಾಗತಿಕ ಸತ್ಯ.
ಈ ಬರಹದ ವಸ್ತು ವಿಷಯ ಅಂಬೇಡ್ಕರ್ ಅವರ ಆದರಿಂದ ನನ್ನ ವಿಷಾದವೊಂದನ್ನು ಇಲ್ಲಿ ವ್ಯಕ್ತಪಡಿಸಲು ಇಚ್ಚಿಸುವೆ. ದಲಿತ ಸಮುದಾಯದ ಬೃಹತ್ ಸಂಖ್ಯೆಯ ಯುವ ಜನತೆ ”ಜೈ ಭೀಮ್” ಎಂಬ ಘೋಷಣೆ ಮೊರೆ ಹೋಗಿ, ರಾಜಕೀಯ ಪ್ರೇರಿತ ಶಕ್ತಿಗಳ ಕಾರ್ಯಕ್ರಮಗಳ ವೀಕ್ಷಕರಾಗಿ, ಅವರ ಗೆಲುವಿಗೆ ದಾರಿಯಾಗಲು ಶ್ರಮಿಸುವ ಆಳುಗಳಾಗಿ ಮಾರ್ಪಾಡುಕೊಳ್ಳುತ್ತಿರುವುದು ವಿಷಾದನೀಯ ಮತ್ತು ಖಂಡನೀಯವಾಗಿದೆ. ಇದು ಎಲ್ಲಾ ಸಮುದಾಯದ ಯುವ ಜನತೆಯಿಂದಲೂ ಕಾಣಿಸಿಕೊಳ್ಳುವ ಸಮಸ್ಯೆಯಾಗಿದೆ.
ಅಂಬೇಡ್ಕರ್ ಅವರ ನಿಜವಾದ ದಾರಿಯಲ್ಲಿ ಮುನ್ನಡೆಯುವ ಯುವಕರು ಅಂತಹ ಕೃತ್ಯಗಳಲ್ಲಿ ಕಾಣಸಿಗಲ್ಲ ಎಂಬುದನ್ನು ಪ್ರತ್ಯೇಕವಾಗಿ ಹೇಳಲೇಬೇಕು.
ಅಂಬೇಡ್ಕರ್ ಅವರನ್ನು ದೈವ ಸಮಾನರಾಗಿ ಕಾಣುವವರಿಗೂ ಅವರ ಬದುಕು ಮತ್ತು ಇತಿಹಾಸದ ಅರಿವಿರುವುದಿಲ್ಲ. ಅವರ ಬಗ್ಗೆ ತಿಳಿದುಕೊಳ್ಳಬೇಕಾದ ವಿಚಾರಗಳ ಕಡೆ ಗಮನಹರಿಸುವುದಿಲ್ಲ. ಇದರಿಂದಾಗಿ ಮುಂದೊಂದು ದಿನ ದಲಿತ ಸಮುದಾಯವು ಬಹುದೊಡ್ಡ ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಮರೆತು ಹೋಗಬಾರದು.
ಈ ಎಲ್ಲಾ ಸಮುದಾಯದ ಅನುಕರಿಸಲ್ಪಡುವ ನಾಯಕರು ಬರಹ ಮತ್ತು ಭಾಷಣಕ್ಕೂ ಹಾಗೂ ಆಧುನಿಕ ತಲೆಮಾರಿನ ಯುವಕರ ವಾಟ್ಸಪ್, ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ಸೇರಿದ ಸೋಶಿಯಲ್ ಮೀಡಿಯಾಗಳ ಸ್ಟೋರಿಗಳಿಗೆ ಪೋಸ್ಟುಗಳಿಗೆ ಮಾತ್ರ ಸೀಮಿತಗೊಳಿಸುತ್ತಿದ್ದಾರೆ. ಅವರ ಬದುಕಿನ ನಡೆ ಮತ್ತು ನುಡಿಯಲ್ಲಿ ಕಾಣಸಿಗುವುದು ವಿರಳವಾಗಿದೆ.

Leave a Reply

Your email address will not be published. Required fields are marked *