Visitors have accessed this post 207 times.

ಹಿಂದೂ ಧರ್ಮದ ಸಾಮರಸ್ಯವೇ ನಮ್ಮ ಧ್ಯೇಯ| ಬೈಕಂಪಾಡಿಯಲ್ಲಿ ನಡೆದ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ

Visitors have accessed this post 207 times.

ಮಂಗಳೂರು: ತಾನು ಹಿಂದೂ. ಹಿಂದೂ ಧರ್ಮದ ಆಚಾರ – ವಿಚಾರಗಳನ್ನು ಶಿರಸಾ ವಹಿಸಿ ಪಾಲಿಸುತ್ತಿದ್ದೇನೆ‌. ಇಂತಹ ಹಿಂದೂ ಧರ್ಮ, ಸಾಮರಸ್ಯದ ಬದುಕನ್ನು ತನಗೆ ಹೇಳಿಕೊಟ್ಟಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು.

ಸುರತ್ಕಲ್ ಹಾಗೂ ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಬೈಕಂಪಾಡಿ ಎಪಿಎಂಸಿ ಮುಂಭಾಗ ಮಂಗಳವಾರ ಸಂಜೆ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ತುಳುನಾಡಿನ ಸಂಸ್ಕೃತಿ, ಗ್ರಾಮೀಣ ಸೊಗಡಿನ ಆಟಗಳು ಇವುಗಳ ಜೊತೆಗೆ ಈ ತುಳುನಾಡಿನಲ್ಲಿ ಮೆಡಿಕಲ್ ಹಬ್, ಶಿಕ್ಷಣ ಹಬ್ ಮಾಡಲು ಸಾಧ್ಯ. ಪ್ರವಾಸೋದ್ಯಮ ಬೆಳೆಸಲು ವಿಫುಲ ಅವಕಾಶಗಳಿವೆ. ಇದರಿಂದ ಉದ್ಯೋಗ ಸೃಷ್ಟಿ, ಜಿಲ್ಲೆಯ ಅಭಿವೃದ್ಧಿ ಸಾಧ್ಯ. ಯುವಕರು ನಮ್ಮೂರಲ್ಲೇ ಉದ್ಯೋಗ ಪಡೆಯಲು ಸಾಧ್ಯ. ಮಕ್ಕಳ ಇರುವಿಕೆಯಲ್ಲಿ ಕಾಯುತ್ತಿರುವ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಹೀಗೆ ಅಭಿವೃದ್ಧಿಯ ಜೊತೆ ಹೆತ್ತವರ ಕನಸೂ ಈಡೇರಲಿದೆ. ಮನೆ ಮನೆಗಳು ಗಟ್ಟಿಯಾದರೆ, ದೇಶ ಸಮೃದ್ಧವಾಗಲಿದೆ ಎಂದರು.

ಕಾಂಗ್ರೆಸ್ ಗೆಲ್ಲುವುದು ನಿಶ್ಚಯವಾಗುತ್ತಿದ್ದಂತೆ ಅಪಪ್ರಚಾರದ ಕೆಲಸ ನಡೆಯುತ್ತಿದೆ. ಇದಕ್ಕೆ ಕಿವಿಕೊಡಬೇಡಿ. ನೀವು ತಲೆತಗ್ಗಿಸುವ ಕೆಲಸವನ್ನು ತಾನೆಂದೂ ಮಾಡುವುದಿಲ್ಲ. ನೀವು ಪಟ್ಟ ಶ್ರಮ ವ್ಯರ್ಥವಾಗಬಾರದು. ಆದ್ದರಿಂದ ಮುಂದಿರುವ ಕೆಲವು ಗಂಟೆಗಳಷ್ಟು ಸಮಯ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಿ. ತುಳುನಾಡಿನ ಸಾಮರಸ್ಯದ ಗತವೈಭವ ಮರುಕಳಿಸಲಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಬೈಕಂಪಾಡಿಯಲ್ಲಿ ನಡೆದಿರುವ ಪ್ರಚಾರ ಸಭೆ ಕಾಂಗ್ರೆಸ್ ಗೆಲುವಿನ ದಿಕ್ಸೂಚಿ. ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲುವ ಸೂಚನೆ ಸಿಕ್ಕಿದೆ. ದಕ್ಷಿಣ ಕನ್ನಡದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪ್ರಾಮಾಣಿಕ, ಸಮರ್ಥ ಅಭ್ಯರ್ಥಿ. ಯಾವುದೇ ಕಳಂಕ ರಹಿತ ವ್ಯಕ್ತಿತ್ವ ಅವರದ್ದು. ಮತದಾನದ ಕೊನೆಕ್ಷಣದವರೆಗೂ ಕೆಲಸ ಮಾಡಿ, ಶ್ರಮಿಸಿ ಪದ್ಮರಾಜ್ ಆರ್. ಪೂಜಾರಿ ಅವರನ್ನು ಗೆಲ್ಲಿಸಿ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಮಾತನಾಡಿ, ರಾಜ್ಯದಲ್ಲಿ ೬ ಕೋಟಿಗೂ ಅಧಿಕ ಮಂದಿಗೆ ಕಾಂಗ್ರೆಸ್ ಸರಕಾರ ಗ್ಯಾರೆಂಟಿ ಯೋಜನೆಯನ್ನು ನೀಡಿದೆ. ಇದಲ್ಲದೇ ಅನೇಕ ಅಭಿವೃದ್ಧಿ ಸಾಧನೆಯನ್ನು ಕಾಂಗ್ರೆಸ್ ಮಾಡಿದೆ. ಆದರೆ ಯಾವ ಅಭಿವೃದ್ಧಿ ಸಾಧನೆಯನ್ನು ಮಾಡದ ಬಿಜೆಪಿ, ರಾಜ್ಯದಲ್ಲಿ ಯಾವ ರೀತಿ ಮತ ಕೇಳುತ್ತಾರೆ. ಕಾಂಗ್ರೆಸಿಗರಿಗೆ ಇದರ ಭಯ ಇಲ್ಲ. ಧೈರ್ಯವಾಗಿ ಜನರ ಬಳಿ ಹೋಗಿ ಮತ ಕೇಳಬಹುದು. ಜನರೂ ಕಾಂಗ್ರೆಸ್ ಕಾರ್ಯಕರ್ತರನ್ನು ಸ್ವಾಗತಿಸುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮಾತನಾಡಿ, ಇಷ್ಟು ದಿನ ಕಾಂಗ್ರೆಸ್ ಗೆಲುವಿಗಾಗಿ ಮಾಡಿರುವ ನಮ್ಮ ಶ್ರಮ ವ್ಯರ್ಥವಾಗುವುದಿಲ್ಲ. ಪದ್ಮರಾಜ್ ಆರ್. ಪೂಜಾರಿ ಅವರು ಈ ಬಾರಿ ಗೆದ್ದು, ಜಿಲ್ಲೆಯ ಅಭಿವೃದ್ಧಿಗೆ ಮುನ್ನುಡಿ ಬರೆಯಲಿದ್ದಾರೆ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಮೇಯರ್ ಮಹಾಬಲ, ಎಂ.ಜಿ. ಹೆಗ್ಡೆ, ಯುವ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಆಳ್ವ, ಕಾರ್ಮಿಕ ಘಟಕದ ಅಧ್ಯಕ್ಷ ಲಾರೆನ್ಸ್ ಡಿಸೋಜಾ, ಕೆಪಿಸಿಸಿ ಸದಸ್ಯ ಪೃಥ್ವಿರಾಜ್, ರಾಜೀವ್ ಗಾಂಧಿ ವೈದ್ಯಕೀಯ ವಿವಿ ಸಿಂಡಿಕೇಟ್ ಸದಸ್ಯ ಡಾ. ಇಫ್ತಿಕರ್, ಸುರೇಂದ್ರ ಕಂಬ್ಳಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ಯಾಲೆಟ್ ಪಿಂಟೋ, ಜಯಲಕ್ಷ್ಮೀ ಪೂಜಾರಿ, ಪ್ರತಿಭಾ ಕುಳಾಯಿ, ಪದ್ಮನಾಭ ಕೋಟ್ಯಾನ್, ಜಯಶೀಲ ಅಡ್ಯಂತಾಯ, ಪುರುಷೋತ್ತಮ ಚಿತ್ರಾಪುರ ಮೊದಲಾದವರು ಉಪಸ್ಥಿತರಿದ್ದರು.

ಬೃಹತ್ ರೋಡ್ ಶೋ:
ಪ್ರಚಾರ ಸಭೆಗೆ ಮೊದಲು ಕುಳಾಯಿಯಿಂದ ಬೈಕಂಪಾಡಿಯವರೆಗೆ ಬೃಹತ್ ರೋಡ್ ಶೋ ನಡೆಯಿತು. ಅಭ್ಯರ್ಥಿ, ಮುಖಂಡರು ತೆರೆದ ವಾಹನದಲ್ಲಿ ಸಾಗಿದರೆ, ಬೃಹತ್ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು, ಮತದಾರರು ಕಾಲ್ನಡಿಗೆಯಲ್ಲಿ ಘೋಷಣೆ ಕೂಗುತ್ತಾ, ಗ್ಯಾರೆಂಟಿ ಯೋಜನೆಯ ಫಲಕ ಪ್ರದರ್ಶಿಸುತ್ತಾ ಸಾಗಿದರು. ರೋಡ್ ಶೋಗೆ ಚೆಂಡೆ, ನಾಸಿಕ್ ಬ್ಯಾಂಡ್, ಹುಲಿ ಕುಣಿತ ರಂಗು ತುಂಬಿತು. ಬೈಕಂಪಾಡಿ ಬಳಿ ಬೃಹತ್ ಹೂಮಾಲೆಯನ್ನು ಅಭ್ಯರ್ಥಿಗೆ ಹಾಕಲಾಯಿತು.

Leave a Reply

Your email address will not be published. Required fields are marked *