ಮಂಗಳೂರು ಕಾಲೇಜಿನ ಟಾಯ್ಲೆಟ್‌ನಲ್ಲಿ ಚಿತ್ರೀಕರಣ ಪ್ರಕರಣ: 6 ನಿಮಿಷದ ವಿಡಿಯೋ ಸೆರೆ

ಮಂಗಳೂರಿನ ವೈದ್ಯಕೀಯ ಕಾಲೇಜಿನ ಟಾಯ್ಲೆಟ್‌ನಲ್ಲಿ ಮೊಬೈಲ್ ಇರಿಸಿ ವಿಡಿಯೋ ಚಿತ್ರೀಕರಿಸಿದ ಘಟನೆ ವಿವಾದ ಸೃಷ್ಟಿಸಿದೆ. ಈ ಪ್ರಕರಣದ ಆರೋಪಿ ಅಪ್ರಾಪ್ತ ವಯಸ್ಕನಾಗಿರುವುದರಿಂದ ಪೊಲೀಸರಿಗೆ ತನಿಖೆ ನಡೆಸುವುದು ಸವಾಲಾಗಿದೆ.

ನಗರದ ಬಾವುಟಗುಡ್ಡೆ ಮೆಡಿಕಲ್ ಕಾಲೇಜಿನ ಡೆಂಟಲ್ ವಿಭಾಗಕ್ಕೆ ಚಿಕಿತ್ಸೆಗೆಂದು 17 ವರ್ಷದ ಬಾಲಕ ಬರುತ್ತಿದ್ದ. ಈ ಹಿಂದೆ ಎರಡು ಬಾರಿ ತಾಯಿ ಜತೆ ಬಂದಿದ್ದ ಈತ, ಮಂಗಳವಾರ ತಾಯಿಗೆ ಅಸೌಖ್ಯವಿದ್ದ ಕಾರಣ ತಾನೊಬ್ಬನೇ ಬಂದಿದ್ದ. ಮೆಡಿಕಲ್ ಕಾಲೇಜಿನಲ್ಲಿ 30 ರೂ. ಫೀಸ್ ಕಟ್ಟಿ ಅಪಾಯಿಂಟ್‌ಮೆಂಟ್ ಪಡೆದಿದ್ದು, ಬಳಿಕ ಟಾಯ್ಲೆಟ್‌ಗೆ ಹೋಗಿ ಮೊಬೈಲ್ ಇಟ್ಟು ವಿಡಿಯೋ ಆನ್ ಮಾಡುತ್ತಿದ್ದ.

ಬಾಲಕ ಬರುವಾಗ ತಾಯಿಯ ಮೊಬೈಲ್ ತಂದಿದ್ದ. ಟಾಯ್ಲೆಟ್‌ನಲ್ಲಿ ಮೊಬೈಲ್ ಇಟ್ಟು ಹೊರಗೆ ತಿರುಗಾಡಲು ಹೋಗಿದ್ದ. ಪೊಲೀಸರು ಮೊಬೈಲ್ ವಶಕ್ಕೆ ಪಡೆದು ನಂಬರ್ ಆಧಾರದಲ್ಲಿ ಪರಿಶೀಲನೆ ನಡೆಸಿ ಅಪ್ರಾಪ್ತ ಬಾಲಕನ ತಾಯಿಯನ್ನು ಬರಲು ಹೇಳಿದ್ದಾರೆ. ಕೆಲ ಹೊತ್ತಿನ ಬಳಿಕ ತಾಯಿಯ ಜತೆ ಬಾಲಕನೂ ಆಗಮಿಸಿದ್ದಾನೆ.

ಬಾಲಕ ಕೃತ್ಯಕ್ಕೆ ಬಳಸಿದ ಮೊಬೈಲ್‌ ಅನ್ನು ತನಿಖಾಧಿಕಾರಿಗಳು ಪರಿಶೀಲನೆ ನಡೆಸಿದಾಗ ಕೃತ್ಯದ ಮಾದರಿಯ ಅವಧಿ ಯಾವುದೇ ಫೋಟೋ, ವಿಡಿಯೋಗಳು ಪತ್ತೆಯಾಗಿಲ್ಲ. ಪೊಲೀಸರು ಮೊಬೈಲ್ ವಶಪಡಿಸಿಕೊಂಡು ಮತ್ತಷ್ಟು ತನಿಖೆಗೊಳಪಡಿಸಿದ್ದಾರೆ. ಬಾಲಕನನ್ನು ಬಾಲಪರಾಧ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅಪ್ರಾಪ್ತ ಬಾಲಕ ಟಾಯ್ಲೆಟ್‌ನಲ್ಲಿ ವಿಡಿಯೋ ಚಿತ್ರೀಕರಣಕ್ಕೆ ಇಟ್ಟ ಮೇಲೆ ಸುಮಾರು 6 ನಿಮಿಷದ ವಿಡಿಯೊ ಚಿತ್ರೀಕರಣವಾಗಿದೆ. ಈ ಅವಧಿಯಲ್ಲಿ ಮಹಿಳೆಯೊಬ್ಬರು ಟಾಯ್ಲೆಟ್‌ಗೆ ಬಂದು ಹೋಗಿರುವುದು ಸೆರೆಯಾಗಿದೆ. ಆದರೆ ಮಹಿಳೆಯ ತಲೆ ಮಾತ್ರ ಕಂಡು ಬರುತ್ತಿದ್ದು, ವಿಡಿಯೋ ಸ್ಪಷ್ಟವಾಗಿ ಸೆರೆಯಾಗಿಲ್ಲ. ಇದಾದ ನಂತರ ಮೊಬೈಲ್‌ಗೆ ಕರೆ ಬಂದಿದೆ.

ಟಾಯ್ಲೆಟ್ ವಿಡಿಯೋ ಚಿತ್ರೀಕರಣಕ್ಕಿಟ್ಟ ಕಿಡಿಗೇಡಿ ಇನ್ನೂ 17 ವರ್ಷದವನು. ಅಪ್ರಾಪ್ತನಾಗಿರುವ ಕಾರಣ ಆತನನ್ನು ತನಿಖೆಗೆ ಒಳಪಡಿಸುವುದೇ ತನಿಖಾಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ. ತನಿಖೆ ವೇಳೆ ಮುಗ್ಧನಂತೆ ವರ್ತಿಸುವ ಈತ ಸ್ಪಷ್ಟವಾಗಿ ಯಾವುದಕ್ಕೂ ಉತ್ತರ ನೀಡುತ್ತಿಲ್ಲ.

ಮತ್ತೆ ಉಡುಪಿಗೆ ಕೇಸ್ ಲಿಂಕ್
ಉಡುಪಿಯಲ್ಲಿ 2023ರ ಜುಲೈ ತಿಂಗಳಿನಲ್ಲಿ ಉಡುಪಿಯ ಕಾಲೇಜೊಂದರ ಮಹಿಳಾ ಶೌಚಾಲಯದಲ್ಲಿ ಮೂವರು ಅನ್ಯಕೋಮಿನ ಯುವತಿಯರು ಕ್ಯಾಮೆರಾ ಇಟ್ಟು ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಿಸಿದ್ದರು. ಇದು ರಾಜ್ಯಾದ್ಯಂತ ಭಾರಿ ಗದ್ದಲವೆಬ್ಬಿಸಿದ್ದು, ಬಳಿಕ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತು ಮಾಡಲಾಗಿತ್ತು. ಈ ಪ್ರಕರಣ ಸಿಐಡಿಗೆ ಒಪ್ಪಿಸಲಾಗಿದ್ದು, ತನಿಖಾ ತಂಡ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿತ್ತು. ಈಗ ಮಂಗಳೂರು ಮೆಡಿಕಲ್ ಕಾಲೇಜಿನ ಟಾಯ್ಲೆಟ್‌ನಲ್ಲಿ ಪತ್ತೆಯಾದ ವಿಡಿಯೋ ಚಿತ್ರೀಕರಣದ ಆರೋಪಿ ಉಡುಪಿಯ ಕಾಪುವಿನವನಾಗಿದ್ದಾರೆ. ಹೀಗಾಗಿ ಈ ಎರಡೂ ಪ್ರಕರಣಗಳಿಗೆ ನಂಟು ಇದೆ ಎಂಬ ಗುಮಾನಿ ವ್ಯಕ್ತವಾಗಿದೆ.

Leave a Reply