
ಪುತ್ತೂರು: ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಬೆಳಗ್ಗೆ ಪುತ್ತೂರಿನ ನರಿಮೊಗರು ಗ್ರಾಮದ ಪುರುಷರಕಟ್ಟೆ ಎಂಬಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕುಂಡಡ್ಕ ನಿವಾಸಿ ಮೋಕ್ಷಿತ್ ಗೌಡ (23) ಮೃತಪಟ್ಟ ಯುವಕ. ಮೋಕ್ಷಿತ್ ಗೌಡ ಪುರುಷರಕಟ್ಟೆಯಲ್ಲಿರುವ ಬಿಂದು ಫ್ಯಾಕ್ಟರಿಯಲ್ಲಿ ಸಿಫಾನ್ ಮೆಷಿನ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಪುರುಷರಕಟ್ಟೆಯಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸ್ತವ್ಯವಿದ್ದರು. ಮೋಕ್ಷಿತ್ ಸರ್ವಿಸ್ ಗೆ ಇಟ್ಟಿದ್ದ ತನ್ನ ಬೈಕನ್ನು ವಾಪಾಸು ತರುತ್ತಿದ್ದ ವೇಳೆ ಕಾಣಿಯೂರು ಸುಬ್ರಹ್ಮಣ್ಯ ರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರಿ ಠಾಣೆಯ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.


