
ಕಂಟೈನರ್ ಲಾರಿ ಮತ್ತು ಇನ್ನೋವಾ ಕಾರು ಢಿಕ್ಕಿಯಾಗಿ ತಾಯಿ-ಮಗ ಮೃತಪಟ್ಟ ಘಟನೆ ಮಂಗಳವಾರ ಬೆಳಿಗ್ಗೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಶಿರಾಡಿ ಘಾಟ್ ನಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.



ಮೃತರನ್ನು ಪಾಣೆಮಂಗಳೂರು ಸಮೀಪದ ಬೊಂಡಾಲ ನಿವಾಸಿ ಶಬೀರ್ ಎಂಬವರ ಪತ್ನಿ ಸಫಿಯಾ(50) ಮತ್ತು ಪುತ್ರ ಮುಹಮ್ಮದ್ ಶಫೀಕ್(20) ಎಂದು ಗುರುತಿಸಲಾಗಿದೆ.
ಬೆಂಗಳೂರಿನಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕಾರಿಗೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಂಟೈನರ್ ಲಾರಿ ಶಿರಾಡಿ ಘಾಟ್ ನ ಕೆಂಪುಹೊಳೆ ಸಮೀಪ ಢಿಕ್ಕಿ ಹೊಡೆದಿದೆ.
ಅನಾರೋಗ್ಯ (ಕ್ಯಾನ್ಸರ್)ದಿಂದ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಬೀರ್ ಅವರನ್ನು ಸಂದರ್ಶಿಸಿ, ಸಂಬಂಧಿಕರೋರ್ವರ ಮದುವೆ ಔತಣಕೂಟದಲ್ಲಿ ಭಾಗವಹಿಸಿ, ಹಿಂದಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಮೂವರು ಮಕ್ಕಳ ಸಹಿತ ಇತರರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
ಮೃತದೇಹವನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.