
ಮಂಗಳೂರು: ಮನೆಯೊಂದಕ್ಕೆ ನುಗ್ಗಿದ ಕಳ್ಳರು 35 ಪವನ್ ಚಿನ್ನಾಭರಣ ಕಳವುಗೈದ ಘಟನೆ ಗಡಿಭಾಗದ ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಪುತ್ತೂರು ಮುಂಡಕಯಲ್‌ನಲ್ಲಿ ನಡೆದಿದೆ. ಮುಂಡಕಯಲ್ ಮುಹಮ್ಮದ್ ಇಲ್ಯಾಸ್ ಎಂಬವರ ಮನೆಯಲ್ಲಿ ಮೇ 15 ರಿಂದ 19ರ ಸಂಜೆ ತನಕದ ಅವಧಿಯಲ್ಲಿ ಕಳವು ಕೃತ್ಯ ನಡೆದಿದೆ. ಮುಹಮ್ಮದ್ ಇಲ್ಯಾಸ್ ಗಲ್ಫ್ ನಲ್ಲಿ ಉದ್ಯೋಗ ದಲ್ಲಿದ್ದು, ಪತ್ನಿ ಮೇ 15ರಂದು ತವರು ಮನೆಗೆ ತೆರಳಿದ್ದರು. ರವಿವಾರ ಸಂಜೆ ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಮನೆಯ ಮುಂಭಾಗದ ಬಾಗಿಲಿನ ಬೀಗ ಮುರಿದು ಒಳನುಗ್ಗಿರುವ ಕಳ್ಳರು ಕೋಣೆಯಲ್ಲಿದ್ದ ಕಪಾಟನ್ನು ಮುರಿದು ಚಿನ್ನಾಭರಣವನ್ನು ಕಳವು ಮಾಡಿದ್ದಾರೆ ಎಂದು ಕಾಸರಗೋಡು ನಗರ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.


