
ಹೈದರಾಬಾದ್: ಬಿಜೆಪಿಯು ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಿಕೊಂಡು ಮತದಾನ ಪ್ರಕ್ರಿಯೆಯಲ್ಲಿ ಅಡೆತಡೆ ಸೃಷ್ಟಿಸುತ್ತಿದೆ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಕಿಡಿ ಕಾರಿದ್ದಾರೆ. ಬುಧವಾರ ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಬುರ್ಖಾ ಧರಿಸಿರುವ ಮಹಿಳೆಯರನ್ನು ವಿಶೇಷ ತಪಾಸಣೆಗೆ ಒಳಪಡಿಸಬೇಕು ಎಂದು ಬಿಜೆಪಿಯ ದೆಹಲಿ ಘಟಕ ಚುನಾವಣಾ ಆಯೋಗಕ್ಕೆ ತಿಳಿಸಿದೆ. ಚುನಾವಣಾ ಆಯೋಗ ಪರಿಶೀಲನೆಯ ನಂತರವೇ ಮತದಾನಕ್ಕೆ ಅವಕಾಶ ಮಾಡಿಕೊಡಲಿದೆ. ಪರಿಶೀಲನೆ ಮಾಡದೇ ಮತದಾನ ಯಾರೂ ಮಾಡುವುದಿಲ್ಲ. ಅದಕ್ಕಾಗಿಯೇ ಚುನಾವಣಾ ಆಯೋಗ ಸ್ಪಷ್ಟ ನಿಬಂಧನೆಗಳನ್ನು ಹೊಂದಿದೆ. ಬಿಜೆಪಿ ವಿಶೇಷ ಬೇಡಿಕೆಯೊಂದಿಗೆ ಮುಸ್ಲಿಂ ಮಹಿಳೆಯರಿಗೆ ಕಿರುಕುಳ ನೀಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಮೇ 25ರಂದು 6ನೇ ಹಂತದ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಒಟ್ಟು 6 ರಾಜ್ಯ ಮತ್ತು 2 ಕೇಂದ್ರಾಡಳಿತ ಪ್ರದೇಶಗಳ 58 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಬುಧವಾರ ಮತದಾನ ನಡೆಯುವ ಮೇಳೆ ಬುರ್ಖಾ ಧರಿಸಿ ಬರುವ ಮಹಿಳಾ ಮತದಾರರನ್ನ ವಿಶೇಷ ತಪಾಸಣೆಗೆ ಒಳಪಡಿಸಬೇಕು ಎಂದು ದೆಹಲಿ ಬಿಜೆಪಿ ನಿಯೋಗವು ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಒತ್ತಾಯಿಸಿತ್ತು. ಹೈದ್ರಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರು ಮತಗಟ್ಟೆಯಲ್ಲಿ ಮುಸ್ಲಿಂ ಮಹಿಳೆಯರ ಮತದಾರರ ಗುರುತಿನ ಚೀಟಿಗಳನ್ನು ಖುದ್ದು ಪರಿಶೀಲಿಸಿದ್ದರು. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದ ಬಳಿಕ ಚುನಾವಣಾಧಿಕಾರಿಗಳು ಪ್ರಕರಣ ದಾಖಲಿಸಿದ್ದರು.


