
ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಬೈಕಂಪಾಡಿ ಜೋಕಟ್ಟೆ ಕ್ರಾಸ್ ಬಳಿ ತಡೆರಹಿತ ಬಸ್ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದ್ದು ಸ್ಕೂಟರ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಾಳು ಸ್ಕೂಟರ್ ಸವಾರನನ್ನು ಪಣಂಬೂರು ನಿವಾಸಿ ಸತೀಶ್ ಎಂದು ಗುರುತಿಸಲಾಗಿದೆ. ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಎಕೆಎಂಎಸ್ ಹೆಸರಿನ ತಡೆರಹಿತ ಬಸ್ ಜೋಕಟ್ಟೆ ಕ್ರಾಸ್ ತಲುಪುತ್ತಿದ್ದಂತೆ ಟ್ರಾಫಿಕ್ ಪೊಲೀಸ್ ಜಂಕ್ಷನ್ ಬಳಿ ನಿಲ್ಲಿಸಿದ್ದ ಎರಡು ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬಸ್ ಡಿಕ್ಕಿಯಾದ ಒಂದು ಕಾರು ಮುಂದಕ್ಕೆ ಹೋಗಿ ಎದುರು ನಿಲ್ಲಿಸಿದ್ದ ಬಸ್ಸಿಗೆ ಡಿಕ್ಕಿ ಹೊಡೆದಿದ್ದು ಮತ್ತೆ ಮುಂದಕ್ಕೆ ಚಲಿಸಿ ಬದಿಯಲ್ಲಿ ನಿಲ್ಲಿಸಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭ ಸ್ಕೂಟರ್ ಸವಾರ ಸತೀಶ್ ಎಂಬವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತದಿಂದ ಕೆಲ ಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದ್ದು ಕೂಡಲೇ ಟ್ರಾಫಿಕ್ ಪೊಲೀಸರು ಅಪಘಾತಕ್ಕೀಡಾದ ವಾಹನಗಳನ್ನು ಸ್ಥಳದಿಂದ ತೆರವುಗೊಳಿಸಿದ್ದಾರೆ. ಬಸ್ ಚಾಲಕ ಇರ್ಫಾನ್ ವಿರುದ್ಧ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


