
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸ್ವತಂತ್ರ ತುಳು ಅಧ್ಯಯನ ವಿಭಾಗ ಆರಂಭಿಸಬೇಕೆಂದು ಸಿಂಡಿಕೇಟ್ ಸದಸ್ಯ ಸವಾದ್ ಸುಳ್ಯ ಅವರು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.



ಸ್ಪೀಕರ್ ಯು.ಟಿ. ಖಾದರ್ ಉಪಸ್ಥಿತಿಯಲ್ಲಿ ಸಚಿವರಿಗೆ ಈ ಬೇಡಿಕೆ ಮುಂದಿಟ್ಟಿದ್ದು, ಸಚಿವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸವಾದ್ ಸುಳ್ಯ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಈ ಹಿಂದೆ ಸಿಎಂ ಸಿದ್ದರಾಮಯ್ಯ ಸರಕಾರ ಇರುವಾಗಲೇ 2018-19ರ ಸಾಲಿನಲ್ಲಿ ತುಳು ಎಂಎ ವಿಭಾಗ ಮಂಗಳೂರು ವಿವಿಯಲ್ಲಿ ಆರಂಭಗೊಂಡಿರುವ ಬಗ್ಗೆಯೂ ಸವಾದ್ ಸಚಿವರ ಗಮನಕ್ಕೆ ತಂದಿದ್ದಾರೆ. ಆದರೆ, ಸದ್ಯ ತುಳು ಎಂಎ ವಿಭಾಗ ಕನ್ನಡ ಅಧ್ಯಯನ ವಿಭಾಗದಡಿಯಲ್ಲೇ ಇದ್ದು, ಹೀಗಾಗಿ ಸ್ವತಂತ್ರ ಅಸ್ತಿತ್ವ ಸಿಕ್ಕಿಲ್ಲ. ಸ್ವತಂತ್ರ ಅಧ್ಯಯನ ವಿಭಾಗ ರಚನೆ ಸಲುವಾಗಿ ಈಗಾಗಲೇ ಮಂಗಳೂರು ವಿವಿಯಿಂದ ಉನ್ನತ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಹೋಗಿರುವುದನ್ನು ಸವಾದ್ ಅವರು ಸಚಿವರ ಗಮನಕ್ಕೆ ತಂದಿದ್ದಾರೆ.
ಇದೇ ಸಂದರ್ಭದಲ್ಲಿ ಜೊತೆಗಿದ್ದ ಮಂಗಳೂರು ಕ್ಷೇತ್ರದ ಶಾಸಕ ಮತ್ತು ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಈ ಬಗ್ಗೆ ಸ್ಪಂದಿಸಿದ್ದು, ತುಳು ಅಧ್ಯಯನ ವಿಭಾಗ ರಚಿಸುವುದಕ್ಕೆ ಆದ್ಯತೆ ನೀಡುವಂತೆ ಸಚಿವರಿಗೆ ಸೂಚಿಸಿದ್ದಾರೆ. ಅಲ್ಲದೆ, ಆಂಧ್ರಪ್ರದೇಶದ ಕುಪ್ಪಂ ವಿವಿಯಲ್ಲಿ ತುಳು ಅಧ್ಯಯನ ವಿಭಾಗ ಇದೆ. ನಮ್ಮ ತುಳು ಭಾಷಿಕರು ಇರುವಂತಹ ಮಂಗಳೂರು ವಿವಿಯಲ್ಲಿ ತುಳು ಅಧ್ಯಯನ ವಿಭಾಗ ಇಲ್ಲದಿರುವುದು ದೊಡ್ಡ ಕೊರತೆಯಾಗಿದೆ ಎಂದು ಸಚಿವರಿಗೆ ಮನವರಿಕೆ ಮಾಡಿದ್ದಾರೆ.
ಸ್ಪೀಕರ್ ಯುಟಿ ಖಾದರ್ ಮಾಡಿದ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು ಕೂಡಲೇ ತನ್ನ ಕಾರ್ಯದರ್ಶಿ ಮೂಲಕ ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ರವಾನಿಸಿದ್ದಾರೆ. ಈ ಬಗ್ಗೆ ತುರ್ತು ಗಮನಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆಂದು ಸಿಂಡಿಕೇಟ್ ಸದಸ್ಯ ಸವಾದ್ ಸುಳ್ಯ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.