ಬಜಪೆ: ಫೈನಾನ್ಸ್‌ಗೆ ನುಗ್ಗಿ ಅ್ಯಸಿಡ್ ಹಾಕಿ ಚಿನ್ನಾಭರಣ ಕಳುವಿಗೆ ಯತ್ನ – ಮೂವರ ಬಂಧನ

ಬಜಪೆ: ಬಜಪೆ ಮಾರುಕಟ್ಟೆ ಸಮೀಪದ ಫೈನಾನ್ಸ್‌ಗೆ ನುಗ್ಗಿ ಅಲ್ಲಿದ್ದ ಮಹಿಳೆಯರ ಮೇಲೆ ಆಸಿಡ್ ಹಾಕಿ ಚಿನ್ನಾಭರಣಗಳನ್ನು ಸುಲಿಗೆ ಮಾಡಲು ಯತ್ನಿಸಿದ ಮೂವರು ಆರೋಪಿಗಳನ್ನು ಬಜಪೆ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಬಜಪೆ ಶಾಂತಿಗುಡ್ಡೆ ನಿವಾಸಿ ಪ್ರಿತೇಶ್ (31), ಸುರತ್ಕಲ್ ಕೋಡಿಕೆರೆ ನಿವಾಸಿ ಧನರಾಜ್ (30) ಹಾಗೂ ಬಾಳ ಗ್ರಾಮದ ಕುಂಬಳಕೆರೆ ನಿವಾಸಿ ಕುಸುಮಾಕರ (37) ಎಂದು ಗುರುತಿಸಲಾಗಿದೆ. ಬಜಪೆ ಗ್ರಾಮದ ನಿವಾಸಿ ಲೆಸ್ಲಿ ಡಿ ಕುನ್ನ ಎಂಬವರ ಬಜಪೆ ಪೇಟೆಯಲ್ಲಿರುವ ಬಜಪೆ ಫೈನಾನ್ಸ್ ಕೊರ್ಪೊರೇಷನ್‌(ರಿ) ಸೊಸೈಟಿಗೆ ಜುಲೈ 4 ರಂದು ಸಂಜೆ ಸುಮಾರು 4 ಗಂಟೆಗೆ ಸ್ಕೂಟರ್‌ನಲ್ಲಿ ಬುರ್ಖಾ ಧರಿಸಿದ ಮಹಿಳೆ ಮತ್ತು ಇಬ್ಬರು ಗಂಡಸರು ಬಂದಿದ್ದಾರೆ. ಬುರ್ಖಾ ಹಾಕಿಕೊಂಡಿದ್ದ ಮಹಿಳೆ ಸೊಸೈಟಿಯಲ್ಲಿ ಕೆಲಸ ಮಾಡಿಕೊಂಡಿದ್ದ ಮಹಿಳೆಯರ ಮೇಲೆ ಅಸಿಡ್ ಹಾಕಿ ಕಚೇರಿಯಲ್ಲಿದ್ದ ಚಿನ್ನಾಭರಣಗಳನ್ನು ಸುಲಿಗೆ ಮಾಡಲು ಪ್ರಯತ್ನಿಸಿದ್ದರು. ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜುಲೈ 13ರ ಶನಿವಾರದಂದು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಬಜಪೆ ಪೊಲೀಸರು ಯಶಸ್ವಿಯಾಗಿದ್ದಾರೆ. ಹಾಡಹಗಲೆ ಭಯಾನಕ ರೀತಿಯಲ್ಲಿ ಆಸಿಡ್ ಬಳಸಿ ಸುಲಿಗೆ ಮಾಡಲು ಪ್ರಯತ್ನಿಸಿ ಭಯದ ವಾತಾವರಣ ಸೃಷ್ಟಿಸಿದ್ದ ಆರೋಪಿಗಳನ್ನು ಬಂಧಿಸಿದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಆರೋಪಿಗಳು ಕೃತ್ಯದ ಮೊದಲು, ಕೃತ್ಯದ ನಂತರ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಒಟ್ಟು ಸುಮಾರು 15 ಲಕ್ಷ ರೂ ಮೌಲ್ಯದ ಇನೋವಾ ಕಾರು, ಸ್ವಿಪ್ಟ್ ಕಾರು ಹಾಗೂ ಸ್ಕೂಟರ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ಪ್ರಿತೇಶ್‌ನ ವಿರುದ್ಧ ಸುರತ್ಕಲ್ ಠಾಣೆಯಲ್ಲಿ 2 ಕಳವು ಪ್ರಕರಣ ಹಾಗೂ ಬಜಪೆ ಠಾಣೆಯಲ್ಲಿ 1 ಕಳವು ಪ್ರಕರಣ ದಾಖಲಾಗಿವೆ. ಧನರಾಜ್ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣಿಯಲ್ಲಿ 2 ಕೊಲೆ ಯತ್ನ ಪ್ರಕರಣ, ಮೂಡಬಿದಿರೆ ಠಾಣಿಯಲ್ಲಿ 1 ಕೊಲೆ ಯತ್ನ ಪ್ರಕರಣ, ಸುರತ್ಕಲ್ ಠಾಣಿಯಲ್ಲಿ 1 ಜೀವ ಬೆದರಿಕೆ ಹಾಕಿದ ಪ್ರಕರಣ ದಾಖಲಾಗಿವೆ. ಇನ್ನು ಕುಸುಮಾಕರ ವಿರುದ್ಧ ಸುರತ್ಕಲ್ ಠಾಣಿಯಲ್ಲಿ 2 ಕಳವು ಪ್ರಕರಣ, ಬಜಪೆ ಠಾಣಿಯಲ್ಲಿ 1 ಕಳವು ಪ್ರಕರಣ ದಾಖಲಾಗಿತ್ತು. ಬಜಪೆ ಪೊಲೀಸ್ ಠಾಣೆಯ ನಿರೀಕ್ಷಕ ಸಂದೀಪ್ ಜಿ.ಎಸ್ ಅವರ ನೇತೃತ್ವದಲ್ಲಿ ಬಜಪೆ ಪೊಲೀಸ್ ಠಾಣೆಯ ಪಿಎಸ್‌ಐ ರೇವಣ ಸಿದ್ದಪ್ಪ, ಪಿ ಎಸ್ ಐ ಕುಮಾರೇಶನ್, ಪಿ ಎಸ್ ಐ ಲತಾ, ಸಿಬ್ಬಂದಿಯವರಾದ ಎಎಸ್ ಐ ರಾಮ ಪೂಜಾರಿ ಮೇರೆಮಜಲು, ರಶೀದ ಶೇಖ್, ಸುಜನ್, ದೇವಪ್ಪ, ಬಸವರಾಜ್ ಪಾಟೀಲ್, ಕೆಂಚಪ್ಪ, ಚಿದಾನಂದ, ಪ್ರಕಾಶ್, ದುರ್ಗಾ ಪ್ರಸಾದ್, ಜಗದೀಶ್, ದಯಾನಂದ, ಮದು, ಅನಿಲ್ ಕುಮಾರ್, ಭಿಮಪ್ಪ, ವಿರುಪಾಕ್ಷ, ಭರಮಪ್ಪ, ಚೇತನ್, ಪ್ರಜ್ವಲ್ ಮತ್ತು ಇತರರು ಪತ್ತೆಕಾರ್ಯದಲ್ಲಿ ಸಹಕರಿಸಿದ್ದರು.

Leave a Reply