ನನ್ನ ಒಂದು ಷರತ್ತಿಗೆ ಒಪ್ಪಿದ್ರೆ ಪಾದಯಾತ್ರೆಗೆ ಬರುವೆ : ಬಿಜೆಪಿ ಹೈ ಕಮಾಂಡಿಗೆ HD ಕುಮಾರಸ್ವಾಮಿ ಖಡಕ್ ಸಂದೇಶ

ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧ ಹೋರಾಟ ನಡೆಸಲು ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ಭಾಗಿಯಾಗದಿರಲು ಹೆಚ್​ಡಿ ಕುಮಾರಸ್ವಾಮಿ ತೀರ್ಮಾನಿಸಿದ್ದು ಸದ್ಯ ಬಿಜೆಪಿ ನಾಯಕರು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಹೆಚ್​ಡಿಕೆ ಬಿಜೆಪಿ ಹೈಕಮಾಂಡ್​ಗೆ ಷರತ್ತು ಹಾಕಿದ್ದು ಷರತ್ತಿಗೆ ಒಪ್ಪಿದರೆ ಪಾದಯಾತ್ರೆಗೆ ಬರುವೆ ಎಂದು ಖಡಕ್ ಆಗಿ ಸಂದೇಶ ರವಾನಿಸಿದ್ದಾರೆ.

 

ಹೌದು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಜೆಡಿಎಸ್ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಬೆಂಗಳೂರಿಂದ ಮೈಸೂರಿಗೆ ಆಗಸ್ಟ್ 3 ರಂದು ಪಾದಯಾತ್ರೆ ನಡೆಸಲು ತೀರ್ಮಾನಿಸಿತ್ತು. ಪಾದಯಾತ್ರೆ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಬಿಜೆಪಿ ಜೆಡಿಎಸ್ ಜಂಟಿ ಸಭೆ ಕೂಡ ನಡೆಸಿದ್ದರು.

ಆದರೆ ಈ ಪಾದಯಾತ್ರೆಯಲ್ಲಿ ಪ್ರೀತಂಗೌಡ ಭಾಗಿಯಾಗುತ್ತಿರುವ ಕಾರಣಕ್ಕೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಕೆಂಡಕಾರಿದ್ದು ಪಾದಯಾತ್ರೆಯಲ್ಲಿ ಜೆಡಿಎಸ್​ ಪಕ್ಷದ ಯಾರೊಬ್ಬರೂ ಭಾಗಿಯಾಗುವುದಿಲ್ಲ ಎಂದು ಕಡ್ಡಿ ಮುರಿದಂತೆ ಖಡಕ್​ ಆಗಿ ನಿರ್ಧಾರ ತಿಳಿಸಿದ್ದರು.

ಸದ್ಯ ಮೈತ್ರಿ ಪಕ್ಷದಲ್ಲಿ ಗೊಂದಲ ವ್ಯಕ್ತವಾದ ಹಿನ್ನೆಲೆ ಜೆ.ಪಿ ನಡ್ಡಾ, ಪ್ರಹ್ಲಾದ್ ಜೋಷಿ ಅವರು ಹೆಚ್​ಡಿ ಕುಮಾರಸ್ವಾಮಿ ಅವರ ಮನವೊಲಿಸಲು ಪ್ರಯತ್ನಿಸಿದ್ದು ಈ ವೇಳೆ ಹೆಚ್​ಡಿಕೆ ಒಂದು ಷರತ್ತು ಇಟ್ಟಿದ್ದಾರೆ. ಪ್ರೀತಂಗೌಡ ಪಾದಯಾತ್ರೆಯಲ್ಲಿ ಇರಬಾರದು. ಹಾಗಿದ್ದಾಗ ಮಾತ್ರ ಪಾದಯಾತ್ರೆಯಲ್ಲಿ ಜೆಡಿಎಸ್ ಭಾಗಿಯಾಗುತ್ತೆ ಎಂದು ಬಿಜೆಪಿ ಹೈಕಮಾಂಡ್ ನಾಯಕರಿಗೆ ಹೆಚ್​ಡಿಕೆ ಷರತ್ತು ಹಾಕಿದ್ದಾರೆ. ಈ ಮೂಲಕ ಬಿಜೆಪಿ ಹೈಕಮಾಂಡ್ ಗೆ ಸಂದೇಶ ರವಾನಿಸಿದ್ದಾರೆ.

Leave a Reply