January 29, 2026
WhatsApp Image 2024-08-01 at 9.14.44 AM

ಮಂಗಳೂರು: ಆನ್ಸೆನ್ ಆಟ ಪಬ್ ಜಿ ಆಡುವ ಚಟ ಬೆಳೆಸಿಕೊಂಡಿದ್ದ ಮಂಗಳೂರಿನ ಬಿಜೈಯ ಯುವತಿಯೋರ್ವಳು ಮಂಗಳವಾರ ಮಧ್ಯಾಹ್ನ ನಾಪತ್ತೆಯಾಗಿದ್ದಾಳೆ. ಬಿಜೈ ನಿವಾಸಿ ಕೆನ್ಯೂಟ್ ಫೆರಾವೊ ಅವರ ಪುತ್ರಿ ಕೆಲಿಸ್ತಾ ಫೆರಾವೊ (18) ನಾಪತ್ತೆಯಾದವರು. ಆಕೆಯ ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದ ಆಕೆಯ ತಂದೆ ಕೆನ್ಯೂಟ್‌ ಫೆರಾವೊ ರಸ್ತೆ ಅಪಘಾತಕ್ಕೆ ತುತ್ತಾಗಿ ಗಂಭೀರವಾಗಿ ಗಾಯಗೊಂಡ ಘಟನೆ ಕೂಡ ಕೆಲ ಹೊತ್ತಿನ ಬಳಿಕ ನಡೆದಿದ್ದು. ಎರಡೆರಡು ಆಘಾತದಿಂದ ಕುಟುಂಬ ತಲ್ಲಣಿಸಿದೆ.

ಕೆಲಿಸ್ತಾ ಎಸೆಸೆಲ್ಸಿ ಪೂರ್ಣಗೊಳಿಸಿದ್ದು, ಸದ್ಯ ಆಟೊಮೊಬೈಲ್ ಕೋರ್ಸೆ ಸೇರ್ಪಡೆಗೊಂಡಿದ್ದರು. ಈಕೆ ಮಂಗಳವಾರ ಮಧ್ಯಾಹ್ನ 12.15ರ ಸುಮಾರಿಗೆ ಮನೆಯಿಂದ ಹೊರಗೆ ಹೋಗಿದ್ದು, ವಾಪಸ್ಸು ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ.

ನಾಪತ್ತೆ ವಿಚಾರ ಮನೆಯವರ ಗಮನಕ್ಕೆ ಬರುತ್ತಲೇ ಹುಡುಕಾಟ ಆರಂಭಿಸಿದರು. ಸಿಸಿ ಕೆಮರಾವೊಂದನ್ನು ಪರಿಶೀಲಿಸಿದಾಗ ಈಕೆ ಆಟೋರಿಕ್ಷಾದಲ್ಲಿ ಹೋಗುತ್ತಿರುವುದು ಕಂಡು ಬಂದಿದೆ. ಗಾಬರಿಯಲ್ಲಿ ಆಕೆಯನ್ನು ಹುಡುಕಿ ಕರೆ ತರಲು ಹೋದ ತಂದೆ ಕೆನ್ಯೂಟ್ ಫೆರಾವೊ ಅವರಿಗೆ ಮಂಗಳವಾರ ಮಧ್ಯಾಹ್ನ ಬಿಜೈ ಚರ್ಚ್ ಬಳಿ ಕಾರೊಂದು ಢಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡ ಅವರು ನಗರದ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೆಲಿಸ್ತಾಳಿಗೆ ಪಬ್ ಜಿ ಗೇಮ್ ಆಡುವ ಚಟವಿತ್ತು. 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವೇಳೆಯೇ ಈಕೆ ಪಬ್ಬಿ ಆಡುವ ಗೀಳು ಹೊಂದಿದ್ದಳು. ಶಾಲೆಯಿಂದ ಮನೆಗೆ ಬಂದ ಮೇಲೆ ವೈಫೈ ಮೂಲಕ ಮನೆಯ ಮೊಬೈಲ್ನಲ್ಲಿ ಪಬ್ ಜಿ ಆಡುತ್ತಿದ್ದಳು. ಅನ್ ಲೈನ್ ನಲ್ಲಿ ಪಬ್ ಜಿ ಆಡದಂತೆ ಮನೆಯವರು ಬುದ್ದಿ ಮಾತು ಹೇಳಿದರೂ ಕೇಳದ ಆಕೆ ಮತ್ತೆ ಮತ್ತೆ ಆಟ ಮುಂದುವರಿಸಿದ್ದಳು. ಈ ಕುರಿತು ಹಲವು ಬಾರಿ ಮನೆಯಲ್ಲಿ ಗಲಾಟೆಯಾಗಿದೆ. ಇತ್ತೀಚೆಗೆ ಮನೆಯವರು ಈಕೆಗೆ ಮೊಬೈಲ್ ಕೊಡಲು ನಿರ್ಧರಿಸಿ ಸಿಮ್ ಖರೀದಿಸಿದ್ದರು ಎಂದು ತಿಳಿದುಬಂದಿದೆ.
ನಾಪತ್ತೆಯಾದವಳ ಚಹರೆ
ಕೆಲಿಸ್ತಾ ಕನ್ನಡ, ತುಳು, ಇಂಗ್ಲಿಷ್, ಕೊಂಕಣಿ ಭಾಷೆಗಳನ್ನು ಮಾತನಾಡುತ್ತಾಳೆ. ಬಿಳಿ ಟಾಪ್ ಮತ್ತು ನೀಲಿ ಜೀನ್ಸ್ ಪ್ಯಾಂಟ್‌ ಧರಿಸಿದ್ದಳು. ಮಾಹಿತಿ ದೊರೆತವರು ಬರ್ಕೆ ಪೊಲೀಸ್ ಠಾಣೆ (0824-2220522) ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

 

About The Author

Leave a Reply