ಮುದ್ರಾ ಯೋಜನೆಯಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ಹಲವರಿಗೆ ವಂಚನೆ

ಮಂಗಳೂರು: ವ್ಯಕ್ತಿಯೋರ್ವ ಕೇಂದ್ರ ಸರಕಾರದ ಮುದ್ರಾ ಯೋಜನೆಯಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರಿಗೆ 20.50 ಲಕ್ಷ ರೂ. ಪಡೆದು ವಂಚಿಸಿರುವ ಕುರಿತು ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಐಸ್‌ಕ್ರೀಂ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ ಅನಿಲ್‌ ಎನ್ನುವವರಿಗೆ ಪರಿಚಯವಾಗಿದ್ದ ಪ್ರಕಾಶ್ ಪೂಜಾರಿ ಎಂಬಾತ ತಾನು ಮುದ್ರಾ ಯೋಜನೆಯ ಏಜೆಂಟ್ ಎಂದು ಪರಿಚಯಿಸಿ ಸಾಲ ಕೊಡಿಸುತ್ತೇನೆ ಎಂದು ತಿಳಿಸಿದ್ದಾನೆ. ಅನಿಲ್ ಅವರು ಬೇಡ ಎಂದರೂ, ವಿನಯದಿಂದ ಮಾತನಾಡಿ ಹಲವರಿಗೆ 15 ಲಕ್ಷ ರೂ. ವರೆಗೆ ಸಾಲ ತೆಗೆಸಿಕೊಟ್ಟಿದ್ದೇನೆ ಎಂದು ಹೇಳಿದ್ದಾನೆ. 15 ಲಕ್ಷ ರೂ. ಸಾಲದ ಖರ್ಚಿಗೆ 1.50 ಲಕ್ಷ ರೂ. ನೀಡಬೇಕು, ಸಾಲ ಮಂಜೂರು ಆಗದೇ ಇದ್ದಲ್ಲಿ ಹಣ ವಾಪಸು ನೀಡುವುದಾಗಿಯೂ ತಿಳಿಸಿದ್ದಾನೆ. ಆತನ ಮಾತನ್ನು ನಂಬಿ 1.50 ಲಕ್ಷ ರೂ. ಒಟ್ಟುಗೂಡಿಸಿ ಪ್ರಕಾಶ್ ಪೂಜಾರಿಯ ಖಾತೆಗೆ ನೆಫ್ಟ್ ಮಾಡಿದ್ದಾರೆ. ಇದೇ ವೇಳೆ ಇತರರೂ ಕೂಡ ಆತನಿಗೆ ಹಣ ನೀಡಿದ್ದಾರೆ. ಸಾಲ ಮಂಜೂರಾಗದೇ ಇದ್ದಾಗ ಆತನ ಮನೆಗೆ ಹೋಗಿ ವಿಚಾರಿಸಿದ್ದು, ಸಾಲ ಮಂಜೂರಾಗುವ ಬಗ್ಗೆ ಭರವಸೆಯನ್ನೂ ನೀಡಿದ್ದ. ಹಲವು ದಿನಗಳು ಕಳೆದರೂ, ಸಾಲ ದೊರೆಯದೇ ಇದ್ದಾಗ ಆತನ ಮೊಬೈಲ್‌ಗೆ ಕರೆ ಮಾಡಿದ್ದು, ಅದು ಸ್ವಿಚ್ ಆಫ್ ಆಗಿದೆ. ಮನೆಗೆ ಹೋಗಿ ಕೇಳಿದಾಗ ಆತನ ತಾಯಿ ಮತ್ತು ಪತ್ನಿ ಆತ ಮನೆಗೆ ಬಾರದೆ 2 ವರ್ಷ ಆಯಿತು ಎಂದು ತಿಳಿಸಿದ್ದಾರೆ. ಇನ್ನಷ್ಟು ವಿಚಾರಿಸಿದಾಗ ಆತನ ಪತ್ನಿಯೂ ಸಾಲಕ್ಕೆ ಸಂಬಂಧಿಸಿದ ಹಲವರಿಂದ ಹಣ ಪಡೆದಿರುವುದು ತಿಳಿದುಬಂದಿದೆ.

Leave a Reply