
ಮಂಗಳೂರು : ನಾಡಿನಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಮಂಗಳೂರು ಹೋಂ ಸ್ಟೇ ದಾಳಿ ಪ್ರಕರಣದ ಎಲ್ಲಾ ಆರೋಪಿಗಳು ಖುಲಾಸೆಗೊಂಡಿದ್ದಾರೆ. ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪ್ರಕರಣ ನಡೆದು 12 ವರ್ಷಗಳ ಬಳಿಕ ಈ ಮಹತ್ವದ ತೀರ್ಪು ನೀಡಿದೆ.



ಪ್ರಕರಣದ ಬಗ್ಗೆ ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಗಳು ದೋಷ ಮುಕ್ತರಾಗಿದ್ದಾರೆ ಎಂದು ಮಂ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ತ ನ್ಯಾಯಾಲಯದ ನ್ಯಾಯಾಧೀಶರಾದ ಕಾಂತರಾಜು ತೀರ್ಪು ನೀಡಿದ್ದಾರೆ.2012ರ ಜುಲೈ 28ರಂದು ಮಂಗಳೂರಿನ ಪಡೀಲ್ ಬಳಿಯ ಮಾರ್ನಿಂಗ್ ಮಿಸ್ಟ್ ಹೋಂಸ್ಟೇ ಮೇಲೆ ದಾಳಿ ನಡೆದಿತ್ತು. ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಈ ದಾಳಿ ನಡೆಸಿದ್ದರು ಎಂದು ಅಪಾದಿಸಲಾಗಿತ್ತು. ಬರ್ತ್ ಡೇ ಪಾರ್ಟಿಯಲ್ಲಿ ನಿರತರಾಗಿದ್ದ ಯುವಕ-ಯುವತಿಯರ ಮೇಲೂ ತಂಡ ದಾಳಿ ಮಾಡಿತ್ತು ಎಂದು ಮಂಗಳೂರು ಗ್ರಾಮಾಂತರ ಪೊಲೀಸರು 44 ಆರೋಪಿಗಳ ವಿರುದ್ದ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿತ್ತು. ಒಟ್ಟು 44 ಆರೋಪಿಗಳ ಪೈಕಿ ಮೂವರು ಸಾವನ್ನಪ್ಪಿದ್ದರು.ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿ ಸೇರ್ಪಡೆಗೊಂಡಿದ್ದ ಪತ್ರಕರ್ತ ನವೀನ್ ಸೂರಿಂಜೆಯನ್ನು ನ್ಯಾಯಾಲಯ ಪ್ರಕರಣದಿಂದ ಕೈಬಿಟ್ಟಿತ್ತು.ಇಂದು ಮಂಗಳವಾರ ಉಳಿದ 40 ಆರೋಪಿಗಳನ್ನ ದೋಷ ಮುಕ್ತಗೊಳಿಸಿ ಕೋರ್ಟ್ ತೀರ್ಪು ನೀಡಿದೆ. ವಕೀಲರಾದ ಶಂಭುಶರ್ಮಾ, ಕಿಶೋರ್ ಕುಮಾರ್ ಅವರ ತಂಡ ಆರೋಪಿಗಳ ಪರ ವಾದ ಮಂಡಿಸಿತ್ತು. 12 ವರ್ಷಗಳ ಬಳಿಕ ಮಂಗಳೂರು ಕೋರ್ಟ್ ನಿಂದ ಅಂತಿಮ ತೀರ್ಪು ಪ್ರಕಟವಾಯಿತು.