ಶಿರೂರು-ಉಳವರೆಗೆ ಭೇಟಿ ನೀಡಿ ಮಾನವೀಯ ನೆರವು ಚಾಚಿದ ಮಂಗಳೂರಿನ ಪತ್ರಕರ್ತರು

ಶಿರೂರು: ಗುಡ್ಡ ಕುಸಿತದಿಂದ ಮನೆಮಠ ಕಳೆದುಕೊಂಡ ಅಂಕೋಲ ತಾಲೂಕಿನ ಉಳವರೆ ಗ್ರಾಮಕ್ಕೆ ಉಳ್ಳಾಲ ಪತ್ರಕರ್ತರ ಸಂಘ ಹಾಗೂ ಮಂಗಳೂರಿನ ಪತ್ರಕರ್ತರ ಚಾರಣ ಬಳಗದ ಸದಸ್ಯರು ಭೇಟಿ ಕೊಟ್ಟು ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಒದಗಿಸುವ ಮೂಲಕ ಮಾನವೀಯ ನೆರವು ಚಾಚಿದರು.
ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿದು ಉಂಟಾದ ದುರಂತದ ಪರಿಣಾಮ ಗಂಗಾವಳಿ ನದಿ ತೀರದಲ್ಲಿರುವ ಉಳವರೆ ಗ್ರಾಮದ 27 ಕುಟುಂಬಗಳು ಮನೆ ಮಠ ಕಳೆದುಕೊಂಡಿದ್ದರೆ 6 ಮನೆಗಳು‌ ಸಂಪೂರ್ಣ ನಾಶವಾಗಿತ್ತು. ಸದ್ಯ
ಉಳವರೆ ಗ್ರಾಮ‌ ನಿರ್ಜನವಾಗಿದ್ದು ನೀರವತೆ ಅಡಗಿದೆ. ಮನೆ ಕಳೆದುಕೊಂಡವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.
ಪತ್ರಕರ್ತರ ತಂಡ ದಾನಿಗಳ ಹಾಗೂ ಮಿತ್ರರ ನೆರವಿನಿಂದ ಸಂಗ್ರಹಿಸಿದ ಆಹಾರ ಸಾಮಗ್ರಿಗಳು ಹಾಗೂ ಅಗತ್ಯ ವಸ್ತುಗಳನ್ನು ಹೊತ್ತುಕೊಂಡು ಮೊದಲು ಉಳವರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿತು. ಅಲ್ಲಿನ ಶಾಲಾ ಮಕ್ಕಳ ಜೊತೆ ಕೆಲಸಮಯ ಕಳೆದ ಪತ್ರಕರ್ತರು ಗುಡ್ಡ ಕುಸಿದ ಸಂದರ್ಭ ಕ್ಷಣಗಳ ಬಗ್ಗೆ ಮಕ್ಕಳಿಂದ ಮಾಹಿತಿ ಪಡೆದು ಅವರಲ್ಲಿ ಧೈರ್ಯ ತುಂಬಿದರು. ಮಕ್ಕಳನ್ನು ಹಲವು‌ ವಿನೋದಾವಳಿ ಹಾಡಿನ ಮೂಲಕ ರಂಜಿಸಿದರು.


ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಉದ್ಯಮಿ ಇಬ್ರಾಹಿಂ ಕಲ್ಲೂರು ಮಾತಾಡಿ, “ಪತ್ರಕರ್ತರು ಸಾಮಾಜಿಕ ಬದ್ಧತೆಯಿಂದ ಕೆಲಸ ಮಾಡುತ್ತಿದು ಮೆಚ್ಚತಕ್ಕ ವಿಚಾರ. ಗ್ರಾಮಸ್ಥರ ಜೊತೆ ನಾವೂ ಇದ್ದೇವೆ. ಬಡ ಜನರ ಜೊತೆ ಇದು ನಿಜಕ್ಕೂ ನಿಲ್ಲಬೇಕಾದ ಸಮಯವಾಗಿದೆ“ ಎಂದರು.
ಉದ್ಯಮಿ ವಿಠಲ ನಾಯಕ್ ಮಾತನಾಡಿ, ”ಪತ್ರಕರ್ತ ಮಿತ್ರರು ದುರಂತ ಸಂಭವಿಸಿದಾಲೂ ಉಳವರೆ ಗ್ರಾಮಕ್ಕೆ ಭೇಟಿ ನೀಡಿದ್ದಲ್ಲದೆ ವೃದ್ಧೆಯ ಶವಸಂಸ್ಕಾರಕ್ಕೆ ಹೆಗಲು ನೀಡುವ ಕೆಲಸ ಮಾಡಿದ್ದರು. ಇದೀಗ ಗ್ರಾಮಸ್ಥರಿಗೆ ಅಗತ್ಯ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ ಅವರಿಗೆ ಅಭಿನಂದನೆಗಳು“ ಎಂದರು.
ಉಳ್ಳಾಲ ಪತ್ರರ್ಕತರ ಸಂಘದ ಅಧ್ಯಕ್ಷ ವಸಂತ್ ಎನ್.‌ಕೊಣಾಜೆ ಮಕ್ಕಳನ್ನುದ್ದೇಶಿಸಿ ಮಾತನಾಡಿ, “ಭೂಕುಸಿತ ಘಟನೆ ನಿಮ್ಮ ಮನಸ್ಸಲ್ಲಿ ಅತೀವ ದುಃಖ ತಂದಿರಬಹುದು. ದುಃಖವನ್ನು ಮರೆತು ಮುಂದೆ ಉತ್ತಮ ಪ್ರಜೆಗಳಾಗಿ” ಎಂದು ಕಿವಿಮಾತು ನುಡಿದರು.
ಪತ್ರಕರ್ತ ಶಶಿ ಬೆಳ್ಳಾಯರು ಮಾತನಾಡಿ, “ನಾವು ದುರಂತ ಸಂಭವಿಸಿದ ಸಂದರ್ಭವೂ ಇಲ್ಲಿಗೆ ಬಂದಿದ್ದೆವು‌. ಇದೀಗ‌ ನಿಮಗೆ ಕಿಂಚಿತ್ ನೆರವು ನೀಡುವ ಉದ್ದೇಶದಿಂದ ಬಂದಿದ್ದೇವೆ. ಕಷ್ಟದ ಸಂದರ್ಭ ಒಬ್ಬರಿಗಿಬ್ಬರು ನೆರವಾಗುವುದು ಮನುಷ್ಯತ್ವ. ನಿಮ್ಮ ಜೀವನದಲ್ಲೂ ಇದನ್ನು ಅಳವಡಿಸಿಕೊಳ್ಳಿ“ ಎಂದರು.
ಮೋಹನ್ ಕುತ್ತಾರ್ ಪುನೀತ್ ರಾಜ್ ಕುಮಾರ್ ಅವರ ಬೊಂಬೆ ಹೇಳುತೈತೆ ಹಾಡು ಹಾಡಿ ಮಕ್ಕಳನ್ನು ರಂಜಿಸಿದರು.
ಶಿಕ್ಷಕಿ ಸಂಧ್ಯಾ ವಿ. ನಾಯ್ಕ್ ಮಾತಾಡಿ, “ಅಷ್ಟು ದೂರದ ಮಂಗಳೂರಿನಿಂದ ಉಳವರೆ ಗ್ರಾಮಕ್ಕೆ ಬಂದು ಗ್ರಾಮಸ್ಥರ ಜೊತೆ ನಿಲ್ಲುವುದೆಂದರೆ ನಿಜಕ್ಕೂ ಪ್ರಶಂಸನೀಯ ಕಾರ್ಯ” ಎಂದರು.
ನಂತರ ಶಾಲಾ ಮಕ್ಕಳಿಗೆ ಪುಸ್ತಕ, ಬಟ್ಟೆ, ಉಳವರೆ ಗ್ರಾಮಕ್ಕೆ ಭೇಟಿ ನೀಡಿ ಅಗತ್ಯ ವಸ್ತುಗಳ ಕಿಟ್ ವಿತರಿಸಲಾಯಿತು. ಈ ವೇಳೆ ಗ್ರಾಮಸ್ಥರು ಹಾನಿಗೊಳಗಾದ ಮನೆ ತೋರಿಸಿ ಕಣ್ಣೀರು ಸುರಿಸಿದರು.
ಈ ಸಂದರ್ಭ ಸಂಘದ ಉಪಾಧ್ಯಕ್ಷ ಆರಿಫ್ ಯುಆರ್, ಶಿವಶಂಕರ್ ಎಂ., ಎಚ್‌ಟಿ ಶಿವಕುಮಾರ್, ಗಿರೀಶ್ ಮಳಲಿ, ಅಶ್ವಿನ್ ಕುತ್ತಾರ್ ಜೊತೆಗಿದ್ದರು.

Leave a Reply