ಮಂಗಳೂರು: ಧಕ್ಕೆಯಲ್ಲಿ ಸ್ಕೂಟರ್‌ಗೆ ಕಾರು ಢಿಕ್ಕಿ; ಕಸಬಾ ಬೆಂಗ್ರೆಯ ಶಿಕ್ಷಕಿ ಸಾವು

ಮಂಗಳೂರು: ನಗರದ ಧಕ್ಕೆಯಲ್ಲಿ ಶುಕ್ರವಾರ(ಆ.16) ಬೆಳಗ್ಗೆ ಸ್ಕೂಟರ್‌ಗೆ ಕಾರು ಢಿಕ್ಕಿಯಾಗಿ ಶಿಕ್ಷಕಿ ಶಾಹಿದಾ (47) ಮೃತಪಟ್ಟಿದ್ದಾರೆ. ಅವರು ಕಸ್ಬಾದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಬೆಳಗ್ಗೆ ಶಾಲೆಗೆಂದು ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಕಾರು ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ಮೃತಪಟ್ಟರು. ಸೋಮೇಶ್ವರ ಪಿಲಾರು ದಾರಂದಬಾಗಿಲಿನ ನಿವಾಸಿಯಾಗಿರುವ ಅವರು ಉಳ್ಳಾಲ ಠಾಣೆಯ ಎಎಸ್‌ಐ ಮಹಮ್ಮದ್‌ ಅವರ ಪತ್ನಿ. ಮೃತರು ಪತಿ, ಇಬ್ಬರು ಪುತ್ರಿಯರು ಮತ್ತು ಪುತ್ರನನ್ನು ಅಗಲಿದ್ದಾರೆ.

ಕಳೆದ 8 ವರ್ಷದಿಂದ ಕಸಬಾ ಬೆಂಗರೆಯ ಎಆರ್‌ಕೆ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಶಾಹಿದಾ ಶುಕ್ರವಾರ ಬೆಳಗ್ಗೆ ತನ್ನ ಮನೆಯಿಂದ ಶಾಲೆಗೆ ತೆರಳುವಾಗ ಬಂದರ್‌ನಲ್ಲಿ ಈ ಅಪಘಾತ ಸಂಭವಿಸಿತು.

ಜಮಾಅತೆ ಇಸ್ಲಾಮೀ ಹಿಂದ್‌ನ ಮಹಿಳಾ ಸಂಘಟನೆಯಲ್ಲಿದ್ದ ಇವರು ಸಮಾಜ ಸೇವಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಶಾಲೆಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವುದು, ಕಲಿಕೆಯಲ್ಲಿ ತೀರಾ ಹಿಂದುಳಿದಿದ್ದ ಮಕ್ಕಳನ್ನು ಗುರುತಿಸಿ ಅವರಿಗೆ ವಿಶೇಷ ತರಬೇತಿ ನೀಡುವುದು, ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು, ವಿದ್ಯಾರ್ಥಿವೇತನ ದೊರಕಿಸಿಕೊಡುವುದು ಇತ್ಯಾದಿಯಾಗಿ ಸಮಾಜ ಸೇವೆಯಲ್ಲಿ ನಿರತರಾಗಿದ್ದರು. ಮಂಗಳೂರು ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲೂ ಇವರು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ ಸ್ಪರ್ಧಿಸಿದ್ದರು.

ಸಂತಾಪ : ಶಿಕ್ಷಕಿ ಶಾಹಿದಾ ಅವರ ನಿಧನಕ್ಕೆ ಬೆಂಗರೆ ಜಮಾತ್‌ನ ಅಧ್ಯಕ್ಷ ಬಿಲಾಲ್‌ ಮೊದಿನ್‌ ಮತ್ತು ಸ್ಥಳೀಯ ಕಾರ್ಪೊರೆಟರ್‌ ಮುನೀಬ್‌ ಬೆಂಗರೆ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ

Leave a Reply