ಬಂಟ್ವಾಳ: ಪಾಣೆಮಂಗಳೂರಿನಲ್ಲಿ ಬೈಕ್ ಮಾರಾಟ ಅಂಗಡಿಯಿಂದ ಟ್ರಯಲ್ ನೋಡಲೆಂದು ದ್ವಿಚಕ್ರ ವಾಹನ ಚಲಾಯಿಸಿಕೊಂಡು ಹೋದ ವ್ಯಕ್ತಿಯೊಬ್ಬ ಹಿಂದಿರುಗದೆ ಪರಾರಿಯಾಗಿದ್ದಾನೆ. ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪುದು ಗ್ರಾಮದ ನಿವಾಸಿ ಮಹಮ್ಮದ್ ಶಮೀರ್ ಬಿನ್ ಉಮರಬ್ಬ ಅವರು ಪೊಲೀಸರಿಗೆ ದೂರು ನೀಡಿದ್ದು, ಇವರು ಮೆಲ್ಕಾರ್- ಪಾಣೆಮಂಗಳೂರಿನಲ್ಲಿ ಬೈಕ್ ಪಾಯಿಂಟ್ ಎಂಬ ಹೆಸರಿನ ಅಂಗಡಿಯನ್ನು ಹೊಂದಿದ್ದು, ಸುಮಾರು 2 ವರ್ಷಗಳಿಂದ ಬೇರೆಯವರಿಂದ ವಾಹನಗಳನ್ನು ಖರೀದಿಸಿ ಮಾರಾಟ ಮಾಡುವ ವ್ಯವಹಾರ ಮಾಡುತ್ತಿದ್ದಾರೆ. ಇವರು 2 ತಿಂಗಳ ಹಿಂದೆ ಕೆಎ70 ಇ9510 ನೋಂದಣಿ – ಸಂಖ್ಯೆಯ ಟಿವಿಎಸ್125 ದ್ವಿಚಕ್ರ ವಾಹನವನ್ನು ಅದರ – ನೋಂದಣಿ ಮಾಲೀಕರಿಂದ ಖರೀದಿಸಿ, ಮಾರಾಟಕ್ಕೆ ತನ್ನ = ಅಂಗಡಿಯಲ್ಲಿಟ್ಟಿದ್ದರು. ಆಗಸ್ಟ್ 13ರಂದು ಸಂಜೆ ಅಂಗಡಿಗೆ ಆಗಮಿಸಿದ ಅಪರಿಚಿತ ವ್ಯಕ್ತಿಯೊಬ್ಬ ಕೆಎ70 ಇ9510 ನೋಂದಣಿ ಸಂಖ್ಯೆಯ ಟಿವಿಎಸ್125 ವಾಹನವನ್ನು ಖರೀದಿಸುತ್ತೇವೆಂದು ಹೇಳಿದ್ದು, ಬಳಿಕ ಟ್ರಯಲ್ ನೋಡಿ ಬರುತ್ತೇನೆಂದು ನಂಬಿಸಿ ದ್ವಿಚಕ್ರ ವಾಹನ ಪಡೆದುಕೊಂಡು ಹೋಗಿದ್ದಾರೆ. ಟ್ರಯಲ್ ನೋಡಲು ಹೋದವರು ಇದುವರೆಗೆ ಹಿಂತಿರುಗಿಸದೆ ವಂಚಿಸಿದ್ದಾರೆಂದು ಅಂಗಡಿಯ ಮಾಲೀಕರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.