November 8, 2025
WhatsApp Image 2024-08-26 at 5.20.23 PM

ಮಂಗಳೂರು: ಚೆಕ್ ಬೌನ್ಸ್ ಪ್ರಕರಣ ಸಾಬೀತಾಗಿರುವ ಹಿನ್ನೆಲೆಯಲ್ಲಿ ನಟಿ ಪದ್ಮಜಾ ರಾವ್ ಅವರಿಗೆ ಮೂರು ತಿಂಗಳು ಸಾಮಾನ್ಯ ಜೈಲು ಶಿಕ್ಷೆ ಹಾಗೂ 40,20,000 ರೂ. ದಂಡ ವಿಧಿಸಿ ಮಂಗಳೂರಿನ ಎಂಟನೇ ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ.

ತುಳು ಸಿನಿಮಾ ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು ಅವರು ತನ್ನಿಂದ 41ಲಕ್ಷ ರೂ. ಹಣ ಪಡೆದು, ಆ ಬಳಿಕ ಹಿಂದಿರುಗಿಸದೆ ವಂಚಿಸಿದ್ದಾರೆ ಎಂದು 2021ರಲ್ಲಿ ಕೇಸು ದಾಖಲಿಸಿದ್ದರು. ನಟ, ನಿರ್ದೇಶಕ ವೀರೇಂದ್ರ ಶೆಟ್ಟಿಯವರಿಗೆ ಪದ್ಮಜಾ ರಾವ್ ಅವರು ಚಾಲಿಪೋಲಿಲು ತುಳು ಸಿನಿಮಾದಲ್ಲಿ ನಟಿಸಲು ಬಂದ ಸಂದರ್ಭ ಪರಿಚಯವಾಗಿದ್ದರು. ಬಳಿಕ ವೀರೇಂದ್ರ ಶೆಟ್ಟಿಯವರ ಒಡೆತನದ ಮಂಗಳೂರಿನ ವೀರೂ ಟಾಕೀಸ್ ಪ್ರೊಡಕ್ಷನ್ಸ್ ಸಂಸ್ಥೆಯಿಂದ ನಟಿ ಪದ್ಮಜಾ ಹಂತ ಹಂತವಾಗಿ 41 ಲಕ್ಷ ರೂ. ಸಾಲ ಪಡೆದಿದ್ದರು. ಸಾಲದ ಭದ್ರತೆಗೆ ಅವರು 40 ಲಕ್ಷ ರೂ. ಚೆಕ್ ನೀಡಿದ್ದರು‌. ಆದರೆ ಪದ್ಮಜಾ ರಾವ್ ಅವರು ಸಾಲದ ಹಣ ಮರು ನೀಡದ ಹಿನ್ನೆಲೆಯಲ್ಲಿ ಬ್ಯಾಂಕ್​ಗೆ ಚೆಕ್ ಹಾಕಲಾಗಿತ್ತು. ಆದರೆ, ಬ್ಯಾಂಕ್​ನಲ್ಲಿ ಹಣವಿಲ್ಲದಿದ್ದರಿಂದ ಚೆಕ್ ಬೌನ್ಸ್ ಆಗಿತ್ತು. ಬಳಿಕ ಪ್ರಕರಣ ಮಂಗಳೂರಿನ ಎಂಟನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮೆಟ್ಟಿಲೇರಿತ್ತು. ವಾದ-ವಿವಾದವನ್ನು ಆಲಿಸಿದ ನ್ಯಾಯಾಲಯ ನಟಿ ಪದ್ಮಜಾ ರಾವ್ ಹಣ ನೀಡದೆ ವಂಚಿಸಿದ್ದು ಸಾಬೀತಾಗಿದೆ ಎಂದು ಘೋಷಿಸಿದೆ. ಆದ್ದರಿಂದ ಪದ್ಮಜಾ ರಾವ್ ಅವರಿಗೆ ಮೂರು ತಿಂಗಳ ಸಾಮಾನ್ಯ ಜೈಲು ಶಿಕ್ಷೆ ಹಾಗೂ 40.20 ಲಕ್ಷ ರೂ. ದಂಡ ವಿಧಿಸಿದೆ. ದಂಡದ ಮೊತ್ತದಲ್ಲಿ 40.17 ಲಕ್ಷ ದೂರುದಾರ ವೀರೇಂದ್ರ ಶೆಟ್ಟಿಗೆ ಹಾಗೂ ಉಳಿದ ಮೂರು ಸಾವಿರವನ್ನು ರಾಜ್ಯದ ಬೊಕ್ಕಸಕ್ಕೆ ವಿಧಿಸಲು ನ್ಯಾಯಾಲಯ ಸೂಚಿಸಿದೆ.

About The Author

Leave a Reply