Visitors have accessed this post 341 times.
ಮಂಗಳೂರು: “ರಾಜ್ಯ ಸರಕಾರ ವಿಘ್ನ ವಿನಾಶಕ ವಿನಾಯಕನಿಗೆ ವಿಘ್ನವನ್ನು ತಂದಿದೆ. ರಾಜ್ಯದಲ್ಲಿ ವಿಜೃಂಭಣೆಯಿಂದ ಗಣೇಶನ ಹಬ್ಬವನ್ನು ಆಚರಣೆ ಮಾಡಲಾಗುತ್ತ ಬಂದಿದೆ. ಆದರೆ ಈ ಬಾರಿ ಮಾತ್ರ ಹೊಸ ನಿಯಮಗಳನ್ನು ಸರಕಾರ ಜಾರಿಗೆ ತಂದಿದೆ. ಆಯೋಜಕರ ಹೆಸರು ವಿಳಾಸ ಹಿಂದೆಯೂ ಪಡೆಯಲಾಗುತ್ತಿತ್ತು. ಆದರೆ ಈ ಬಾರಿ ಮಾತ್ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅತಿಥಿಗಳು, ಚಾಲಕನ ಲೈಸೆನ್ಸ್ ಸಹಿತ ಸಂಪೂರ್ಣ ದಾಖಲೆ ಕೊಡಬೇಕು, ಟ್ಯಾಬ್ಲೋ ಕುರಿತ ಮಾಹಿತಿ ನೀಡಬೇಕೆಂದು ಹೇಳಲಾಗಿದೆ. ಇದು ಹಿಂದೂಗಳ ಧಾರ್ಮಿಕ ಭಾವನೆಗೆ ರಾಜ್ಯ ಸರಕಾರ ಧಕ್ಕೆ ಉಂಟುಮಾಡುವ ಕೆಲಸವಾಗಿದೆ. ಇದನ್ನು ನಾನು ಖಂಡಿಸುತ್ತೇನೆ” ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಪತ್ರಿಕಾಗೋಷ್ಟಿಯಲ್ಲಿ ಆಕ್ರೋಶ ಹೊರಹಾಕಿದರು.
ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆ ಬಳಿ ಅವೈಜ್ಞಾನಿಕವಾಗಿ ಬ್ಯಾರಿಕೇಡ್ ಅಳವಡಿಸಿದ್ದು ಇದರಲ್ಲಿ ಶಾಸಕರು, ಜನಪ್ರತಿನಿಧಿಗಳ ಬಳಿ ಚರ್ಚಿಸದೆ ಸಾರ್ವಜನಿಕರ ಗಮನಕ್ಕೆ ತರದೇ ನಿರ್ಧಾರ ಕೈಗೊಳ್ಳಲಾಗಿದೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇಂತಹ ಕ್ರಮ ಕೈಗೊಳ್ಳಬೇಕು. ಬ್ಯಾರಿಕೇಡ್ ದಾಟಿ ಹೋಗುವಾಗ ಜನರ ಪ್ರಾಣಹಾನಿ ಉಂಟಾದಲ್ಲಿ ಇದಕ್ಕೆ ಯಾರು ಹೊಣೆ?“ ಎಂದು ವೇದವ್ಯಾಸ ಕಾಮತ್ ಪ್ರಶ್ನಿಸಿದರು.
ಹಂಪನಕಟ್ಟೆ ವಿವಿ ಕಾಲೇಜ್ ಮುಂಭಾಗದಲ್ಲಿದ್ದ ಬಸ್ ನಿಲ್ದಾಣವನ್ನು ಏಕಾಏಕಿ ತೆರವುಗೊಳಿಸಲಾಗಿದೆ. ಇದರಿಂದ ಮಕ್ಕಳು ಮಹಿಳೆಯರು ಬಿಸಿಲು ಮಳೆಯಲ್ಲಿ ನಿಂತು ಬಸ್ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಸ್ತಿ ತೆರಿಗೆಯಲ್ಲಿ ಗಣನೀಯ ಹೆಚ್ಚಳವಾಗಿದ್ದು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಬಂದರಿನಲ್ಲಿ ಲೀಸ್ ದರ ಜಾಸ್ತಿ ಮಾಡಿದ್ದು ಇದರಿಂದ ವ್ಯಾಪಾರಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ನಗರದಲ್ಲಿ ಟ್ರಾಫಿಕ್ ಜಾಮ್ ಸಾಮಾನ್ಯವಾಗಿದ್ದು ಟ್ರಾಫಿಕ್ ಸಮಸ್ಯೆ ಪರಿಹರಿಸಲು ಶೀಘ್ರವೇ ಕ್ರಮ ಕೈಗೊಳ್ಳಬೇಕು“ ಎಂದು ಕಾಮತ್ ಒತ್ತಾಯಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಂಗಳೂರು ನಗರ ದಕ್ಷಿಣ ಮಂಡಲದ ಅಧ್ಯಕ್ಷ ರಮೇಶ್ ಕಂಡೆಟ್ಟು, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ಸಂಜಯ್ ಪ್ರಭು, ರಮೇಶ್ ಹೆಗ್ಡೆ, ಲಲ್ಲೇಶ್ ಮತ್ತಿತರರು ಉಪಸ್ಥಿತರಿದ್ದರು.