November 12, 2025
WhatsApp Image 2025-06-29 at 9.46.34 AM

ಪುತ್ತೂರು: ಮಳೆಗಾಲ ಬಂತೆಂದರೆ ಸಾಕು ಮಣ್ಣಿನ ರಸ್ತೆಗಳು ಜಾರುಬಂಡಿಯಂತಾಗುತ್ತವೆ. ಪಾದಾಚಾರಿಗಳು ಜಾಗರೂಕತೆಯಿಂದ ಹೆಜ್ಜೆ ಇಟ್ಟರೂ ಕೆಸರು ರಸ್ತೆ ಮುಗಿಯುವ ಹೊತ್ತಿಗೆ ಚಪ್ಪಲಿಯಲ್ಲಿ ಕೆಸರು ತುಂಬಿರುತ್ತದೆ. ಕೆಲವರು ಜಾರಿ ಬೀಳುವುದೂ ಉಂಟು. ಇನ್ನು ವಾಹನ ಸವಾರರ ಪಾಡು ಹೇಳಬೇಕೇ? ಬ್ರೇಕ್ ಹಾಕಲೂ ಭಯ. ಬ್ರೇಕ್ ಹಾಕಿದರೆ ಹಿಂಬದಿ ಚಕ್ರ ಪಕ್ಕಕ್ಕೆ ಸರಿಯುತ್ತದೆ, ಮುಂದಿನ ಟೈಯರ್ ಜಾರಿದರೆ ಸವಾರನ ಮೈಗೆ ಕೆಸರಾಗುವುದು ನಿಶ್ಚಿತ. ಸದ್ಯ ಈ ಪರಸ್ಥಿತಿಯನ್ನು ತಾಲೂಕಿನ ಬನ್ನೂರು ಗ್ರಾಮದ ದಾರಂದ ಕುಕ್ಕುವಿನಲ್ಲಿರುವ ಜನರು ಎದುರಿಸುತ್ತಿದ್ದಾರೆ.

ಕಂಜೂರು ದೈವಸ್ಥಾನಕ್ಕೆ ಸಂಪರ್ಕಿಸುವ ರಸ್ತೆಯು ಮಸೀದಿ ಬಳಿ ಕೆಸರಿನಿಂದ ತುಂಬಿಕೊಂಡಿದ್ದು, ಶಾಲಾ ಮಕ್ಕಳು ಮತ್ತು ದ್ವಿಚಕ್ರ ವಾಹನ ಸವಾರರು ಸಂಚಾರಕ್ಕೆ ಪರದಾಡುವಂತಾಗಿದೆ. ಸುಮಾರು ೨೦ಕ್ಕೂ ಹೆಚ್ಚು ಮನೆಗಳು ಈ ರಸ್ತೆಯನ್ನೇ ಅವಲಿಂಬಿಸಿದ್ದಾರೆ. ಸುಮಾರು ೫೦ ಮೀ. ರಸ್ತೆ ಕೆಸರುಮಯವಾಗಿದ್ದು, ಮಳೆ ಬರುವಾಗ ಮತ್ತು ಮಳೆ ನಿಂತ ನಂತರ ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಜಾರಲು ಪ್ರಾರಂಭವಾಗುತ್ತವೆ. ಜೂ.೨೭ ರಂದು ಎರಡು ದ್ವಿಚಕ್ರ ವಾಹನಗಳು ಬಿದ್ದಿದ್ದು, ಸವಾರರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಮುಖ್ಯ ರಸ್ತೆಯ ಬಳಿ ಕಾಂಕ್ರೆಟ್ ರಸ್ತೆ ನಿರ್ಮಾಣ ಬಾಕಿ ಇರುವುದರಿಂದ ಈ ಸಮಸ್ಯೆ ಉಂಟಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ರಸ್ತೆ ಸರಿಪಡಿಸುವ ಕಾರ್ಯ ಮಾಡಬೇಕಿದೆ.
ವರದಿ ಅಬ್ದುಲ್ ಖಾದರ್ ಪಾಟ್ರಕೋಡಿ

About The Author

Leave a Reply