
ಉಳ್ಳಾಲ : ಇಬ್ಬರು ಸಿಟಿ ಬಸ್ ಕಂಡೆಕಟ್ಟರ್ ಗಳು ಸಾರ್ವಜನಿಕರ ಎದುರೇ ಪರಸ್ಪರ ಹೊಡೆದಾಡಿಕೊಂಡ ಘಟನೆ ಮಂಗಳೂರು ಹೊರವಲಯದ ಉಳ್ಳಾಲದಲ್ಲಿ ನಡೆದಿದೆ.



ತಲಪಾಡಿ – ಮಂಗಳೂರು ನಡುವೆ ಸಂಚರಿಸುವ ಪದ್ಮ ಟ್ರಾವೆಲ್ಸ್ ಬಸ್ ಮತ್ತು ಹೊಸಂಗಡಿ ಜಂಕ್ಷನ್ ನಿಂದ ಮಂಗಳೂರು ನಡುವೆ ಸಂಚರಿಸುವ ಅಸರ್ ಟ್ರಾವೆಲ್ಸ್ ಬಸ್ ನಿರ್ವಾಹಕರ ನಡುವೆ ಜಗಳ ನಡೆದಿದ್ದು, ಇದರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಸ್ ನಿರ್ವಾಹಕರಾದ ಅಜಯ್ ಮತ್ತು ವಿಷ್ಣು ಎಂಬವರು ಪರಸ್ಪರ ಹೊಡೆದಾಡಿಕೊಂಡಿದ್ದು,ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ಸಂಜೆ ವೇಳೆ ತೊಕ್ಕೊಟ್ಟು ಸಮೀಪ ಈ ಘಟನೆ ನಡೆದಿದೆ. ತಲಪಾಡಿಯಿಂದ ಮಂಗಳೂರಿಗೆ ಹೋಗುತ್ತಿದ್ದ ಬಸ್ಸನ್ನು ಬೆನ್ನಟ್ಟಿದ ಇನ್ನೊಂದು ಬಸ್ಸು ಚಾಲಕ ಓವರ್ ಬ್ರಿಡ್ಜ್ ಬಸ್ಸು ನಿಲ್ದಾಣದಲ್ಲಿ ಅಡ್ಡಲಾಗಿ ಇಟ್ಟಿದ್ದ. ಈ ವೇಳೆ ಎರಡು ಬಸ್ಸು ನಿರ್ವಾಹಕರ ನಡುವೆ ಮಾತಿನ ಚಕಮಕಿ ನಡೆದು ಹೊಯ್ ಕೈಯಾಗಿ ಬೀದಿ ಕಾಳಗ ಆಗಿದೆ ಎಂದು ತಿಳಿದುಬಂದಿದೆ. ಈ ವೇಳೆ ಓವರ್ ಬ್ರಿಡ್ಜ್ ಆಟೋ ರಿಕ್ಷಾ ಪಾರ್ಕಿನ ರಿಕ್ಷಾ ಚಾಲಕರು ಮಧ್ಯ ಪ್ರವೇಶಿಸಿ ಗಲಾಟೆ ನಿಲ್ಲಿಸಿದ್ದು ಬಸ್ಸು ನಿರ್ವಾಹಕ ರನ್ನು ಸಮಾಧಾನಗೊಳಿಸಿ ಕಳುಹಿಸಿದ್ದಾರೆ. ನಿರ್ವಾಹಕರು ಬೀದಿಯಲ್ಲಿ ಕಾದಾಡುತ್ತಿರುವ ದೃಶ್ಯವನ್ನು ಕಾರು ಪ್ರಯಾಣಿಕರೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.