ಉಡುಪಿಯಿಂದ ಬೈಂದೂರಿನತ್ತ ಸಾಗುತ್ತಿದ್ದ ಟ್ಯಾಂಕರ್ ಒಂದರಿಂದ ಕಚ್ಚಾ ತೈಲ ಮಾದರಿಯ ವಸ್ತು ಸೋರಿಕೆಯಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವು ದ್ವಿಚಕ್ರ ವಾಹನ ಸವಾರರು ಬಿದ್ದ ಘಟನೆ ಶನಿವಾರ ಬೆಳಿಗ್ಗೆ ಸಂಭವಿಸಿದೆ.ಕುಂದಾಪುರ ಸಮೀಪದ ಕುಂಭಾಶಿಯಿಂದ ಮೊದಲ್ಗೊಂಡು ಹೆಮ್ಮಾಡಿ ತನಕ ಹೆದ್ದಾರಿಯಲ್ಲಿ ಆಯಿಲ್ ಚೆಲ್ಲಿದ್ದು ಬೆಳಿಗ್ಗೆ ಸಣ್ಣ ಪ್ರಮಾಣದ ಮಳೆ ಬಂದ ಕಾರಣ ಮಳೆನೀರಿನೊಂದಿಗೆ ಆಯಿಲ್ ಮಿಶ್ರ ಗೊಂಡು ರಸ್ತೆಯಲ್ಲಿ ಸಾಗುವ ದ್ವಿಚಕ್ರ ವಾಹನ ಸವಾರರು ಬೀಳುವಂತಾಗಿದೆ.ಮಾತ್ರವಲ್ಲ, ಕಾರು ಮೊದಲಾದ ಲಘು ವಾಹನಗಳಿಗೂ ಇದರಿಂದ ಸಮಸ್ಯೆ ಉಂಟಾಗಿದೆ.ಘಟನೆ ಬೆಳಕಿಗೆ ಬರುತ್ತಲೇ ಎಚ್ಚೆತ್ತುಕೊಂಡ ಪೊಲೀಸರು ಉಡುಪಿ-ಬೈಂದೂರು ಮಾರ್ಗದ ಒಂದು ಕಡೆ ರಸ್ತೆಯನ್ನು ಬಂದ್ ಮಾಡುವ ಮೂಲಕ ಏಕಮುಖ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ. ಟ್ರಾಫಿಕ್ ಠಾಣೆ ಪಿಎಸ್ಐ ಪ್ರಸಾದ್ ಕುಮಾರ್, ಸುದರ್ಶನ್ ಹಾಗೂ ಸಿಬ್ಬಂದಿಗಳು ಹೆದ್ದಾರಿಗೆ ಬ್ಯಾರಿಕೇಡ್ ಅಳವಡಿಸಿ ಅಗತ್ಯ ಕ್ರಮ ಕೈಗೊಂಡಿದ್ದಾರೆ.