Visitors have accessed this post 734 times.
ಬೆಂಗಳೂರು: ಕಳೆದ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಲವು ಸಚಿವರು ಅಧಿಕಾರಿಗಳನ್ನು ಸರ್ ಎಂದು ಕರೆದಿದ್ದಾರೆ. ಇಷ್ಟಕ್ಕೆ ಸಚಿವರ ಮೇಲೆ ಆಕ್ರೋಶಗೊಂಡ ಸಿಎಂ ಸಿದ್ದರಾಮಯ್ಯ ಸಚಿವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಐದು ಕೆ.ಜಿ ಅಕ್ಕಿ ಬದಲು ವ್ಯಕ್ತಿಗೆ 170 ರೂ.ನಂತೆ ಹಣ ವರ್ಗಾವಣೆ ಮಾಡುವುದನ್ನು ಮುಂದುವರಿಸುವುದೂ ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಸಚಿವ ಸಂಪುಟ ಕೈಗೊಂಡಿದೆ. ಇದೇ ವೇಳೆ ಕೆಲವು ಸಚಿವರು ಅಧಿಕಾರಿಗಳನ್ನು ‘ಸರ್, ಸರ್’ ಎಂದು ಸಂಬೋಧಿಸಿ ಮಾತನಾಡುತ್ತಿದ್ದರು. ಇದನ್ನು ಕಂಡ ಸಿಎಂ ಸಿದ್ದರಾಮಯ್ಯ ಸಿಟ್ಟಾದರು. ಅಷ್ಟೇ ಅಲ್ಲ, ಕೆಲವು ಸಚಿವರಿಗೆ ಸಿಟ್ಟಿನಿಂದಲೇ ಕ್ಲಾಸ್ ತೆಗೆದುಕೊಂಡರು. ಯಾವೊಬ್ಬ ಸಚಿವರೂ ಅಧಿಕಾರಿಗಳನ್ನು ‘ಸರ್’ ಎಂದು ಕರೆಯಕೂಡದು ಎಂದು ಅಧಿಕಾರಿಗಳೆದುರಿಗೇ ನೇರವಾಗಿ ಸಿಎಂ ಹೇಳಿದರು. ಸಾಂವಿಧಾನಿಕವಾಗಿ ನೀವು (ಸಚಿವರು) ಇಲಾಖೆಯ ನಾಯಕರು. ಅಧಿಕಾರಿ ವರ್ಗ ನಿಮ್ಮ ಕೈಯಡಿ ಇದೆ. ನೀವೇ ಅಧಿಕಾರಿಗಳಿಗೆ ‘ಸರ್, ಸರ್’ ಎನ್ನುವ ಮೂಲಕ ಮಂತ್ರಿ ಸ್ಥಾನವನ್ನು ಕಡೆಗೆಣಿಸುತ್ತಿದ್ದೀರಾ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.