Visitors have accessed this post 327 times.
ಉಡುಪಿ: ಕಡಿಯಾಳಿಯ ಕೋಚಿಂಗ್ ಸೆಂಟರ್ ವೊಂದಕ್ಕೆ ಹೋಗಿದ್ದ ವೇಳೆ ನಾಪತ್ತೆಯಾಗಿದ್ದ ಬ್ರಹ್ಮಾವರ ಹಂದಾಡಿ ಬಾರಕೂರು ರಸ್ತೆಯ ನಿವಾಸಿ ಪ್ರಕಾಶ್ ಎಂಬುವರ ಪುತ್ರ ಆರ್ಯ (13) ಇಂದು ಬೆಳಗ್ಗೆ ಕೇರಳದ ಪಾಲ್ಘಾಟ್ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿರುವುದಾಗಿ ವರದಿಯಾಗಿದೆ. ಭಾನುವಾರ ಬೆಳಗ್ಗೆ ಉಡುಪಿ ಕಡಿಯಾಳಿಯಲ್ಲಿರುವ ಕೋಚಿಂಗ್ ಇನ್‌ಸ್ಟಿಟ್ಯೂಟ್ ಗೆಂದು ಹೋಗಿದ್ದ ಎಂಟನೇ ತರಗತಿಯ ವಿದ್ಯಾರ್ಥಿ ಆರ್ಯ, ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದ. ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಆರ್ಯ, ಇಂದ್ರಾಳಿ ರೈಲು ನಿಲ್ದಾಣದಿಂದ ರೈಲಿನ ಮೂಲಕ ಕೇರಳದ ಕಡೆ ತೆರಳಿರುವುದು ಕಂಡುಬಂತು. ಅತ್ತ ಟಿಕೆಟ್ ಇಲ್ಲದೆ ಪ್ರಯಾಣಿಸಿದ ಆರ್ಯನನ್ನು ಪಾಲ್ಘಾಟ್ ರೈಲ್ವೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಮಾಹಿತಿ ತಿಳಿದ ಉಡುಪಿ ಪೊಲೀಸರು ಪಾಲ್ಘಾಟ್ ಗೆ ತೆರಳಿದ್ದಾರೆಂದು ತಿಳಿದುಬಂದಿದೆ.