
ಬೆಳ್ತಂಗಡಿ: ಕುತ್ಲೂರು ಗ್ರಾಮದಲ್ಲಿ ಕಾಲೇಜಿಗೆ ಹೋಗಿ ಹಿಂತಿರುಗುತ್ತಿದ್ದ ವಿದ್ಯಾರ್ಥಿನಿಯನ್ನು ನಿರ್ಜನ ಪ್ರದೇಶದಲ್ಲಿ ತಡೆದು ಹಲ್ಲೆ ನಡೆಸಿ, ಬಟ್ಟೆ ಹರಿದು ಮಾನಹಾನಿ ಮಾಡಿ, ಕೊಲೆ ಬೆದರಿಕೆಯೊಡ್ಡಿರುವ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸ್ಥಳೀಯ ನಿವಾಸಿ ಶಂಕರ ದೇವಾಡಿಗ ಹಲ್ಲೆ ನಡೆಸಿದ ಆರೋಪಿ. ಆರೋಪಿ ಮತ್ತು ವಿದ್ಯಾರ್ಥಿನಿ ಕೆಲದಿನಗಳಿಂದ ಅನೋನ್ಯವಾಗಿದ್ದರು. ಈ ವಿಚಾರ ಆಕೆಯ ತಾಯಿಗೆ ತಿಳಿದು ಆತನೊಂದಿಗೆ ಮಾತನಾಡದಂತೆ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಆತನ ನಂಬರ್ ಬ್ಲಾಕ್ ಮಾಡಿದ್ದಳು ಎನ್ನಲಾಗಿದೆ. ಇದೇ ಕಾರಣಕ್ಕೆ ಸೆಪ್ಟೆಂಬರ್ 12ರಂದು ಸಂಜೆ ಕಾಲೇಜು ಮುಗಿಸಿ ವಿದ್ಯಾರ್ಥಿನಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ನಿರ್ಜನ ಪ್ರದೇಶದಲ್ಲಿ ಕಾದು ನಿಂತಿದ್ದ ಆರೋಪಿ ಆಕೆಯ ಮೇಲೆ ದಾಳಿ ನಡೆಸಿದ್ದಾನೆ. ಮೊಬೈಲ್ ಕಸಿದುಕೊಂಡು ಅವಾಚ್ಯವಾಗಿ ನಿಂದಿಸಿ ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದಲ್ಲದೇ ಬಟ್ಟೆಯನ್ನು ಹರಿದು ಮಾನಕ್ಕೆ ಕುಂದುಂಟು ಮಾಡಿದ್ದಾನೆ. ಅಲ್ಲದೇ ನಾಳೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆಯೊಡ್ಡಿರುವುದಾಗಿ ಹಲ್ಲೆಗೊಳಗಾದ ವಿದ್ಯಾರ್ಥಿನಿ ವೇಣೂರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


