ಮಂಗಳೂರು:ರಾಷ್ಟ್ರೀಕೃತ ಬ್ಯಾಂಕೊಂದರ ಬಿ.ಸಿ.ರೋಡು ಶಾಖೆಯೊಳಗೆ ನಡೆದ ನಿವೃತ್ತ ಸೈನಿಕರೊಬ್ಬರ 1.30 ಲಕ್ಷ ರೂ. ನಗದು ಇದ್ದ ಬ್ಯಾಗ್ ಕಳವು ಪ್ರಕರಣವನ್ನು ಭೇದಿಸುವಲ್ಲಿ ಬಂಟ್ವಾಳ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ತೆಕ್ಕಾರು ನಿವಾಸಿ ಮಹಮ್ಮದ್ ಫಾರೂಕ್ (32) ಆರೋಪಿಯಾಗಿದ್ದು ವಿಶೇಷ ತನಿಖಾ ತಂಡವು ಆತನನ್ನು ಮಣಿನಾಲ್ಕೂರು ಗ್ರಾಮದ ಅಜಿಲಮೊಗರಿನಲ್ಲಿ ಬಂಧಿಸಿದೆ. ಸುಮಾರು 80 ಸಾವಿರ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಡ್ಯಾರ್ ರೈಮಂಡ್ ಲೋಬೋ ನಗರ ನಿವಾಸಿ ಅಂಬೋಸ್ ಡಿ’ಸೋಜಾ ಸೆ. 4ರಂದು ಬಿ.ಸಿ.ರೋಡಿನ ಬ್ಯಾಂಕ್ ಶಾಖೆಗೆ ಆಗಮಿಸಿ ತಮ್ಮ ಖಾತೆಯಿಂದ ಪಿಂಚಣಿ ಹಣ 80 ಸಾವಿರ ರೂ.ಗಳನ್ನು ನಗದೀಕರಿಸಿಕೊಂಡು ತಾನು ಬರುವಾಗಲೇ ಜತೆಗೆ ತಂದಿದ್ದ 50 ಸಾವಿರ ರೂ.ಗಳನ್ನು ಸೇರಿಸಿ ಒಟ್ಟು 1.30 ಲಕ್ಷ ರೂ. ಹಣವಿದ್ದ ಬ್ಯಾಗನ್ನು ಮೇಜಿನ ಮೇಲಿಟ್ಟು ಪಾಸ್ ಪುಸ್ತಕ ಮುದ್ರಿಸಿಕೊಳ್ಳಲು ಹೋಗಿದ್ದರು. ಮರಳಿ ಬಂದಾಗ ಬ್ಯಾಗ್ ಕಾಣೆಯಾಗಿತ್ತು. ಅವರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಎಸ್‌ಪಿ ಯತೀಶ್ ಎನ್. ಹಾಗೂ ಎಎಸ್‌ಪಿ ರಾಜೇಂದ್ರ ಮಾರ್ಗದರ್ಶನದಲ್ಲಿ ತು ಬಂಟ್ವಾಳ ಡಿವೈಎಸ್‌ಪಿ ಎಸ್. ವಿಜಯಪ್ರಸಾದ್ ನೇತೃತ್ವದಲ್ಲಿ ಬಂಟ್ವಾಳ ಗ್ರಾಮಾಂತರ ಇನ್‌ಸ್ಪೆಕ್ಟರ್ ಹರೀಶ್ ಎಂ.ಆರ್. ವಿಶೇಷ ತಂಡ ರಚಿಸಿದ್ದರು.