
ಮಗುವಿಗೆ ಜನ್ಮ ನೀಡಿದ್ದ ತಾಯಿಯೊಬ್ಬರು, ತನ್ನ ಮಗುವನ್ನು ಸಾಕಲು ಆಗುವುದಿಲ್ಲ ಎಂಬ ಒಂದೇ ಕಾರಣಕ್ಕೆ ಹಸುಗೂಸನ್ನೇ ಮಾರಾಟ ಮಾಡಿರುವ ಮನಕಲಕುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.



8 ವರ್ಷಗಳ ಕಾಲ ಮಕ್ಕಳಾಗದೆ ಕೊರಗುತ್ತಿದ್ದ ದಂಪತಿ 5 ಲಕ್ಷ ರೂಪಾಯಿಗೆ ಮಗುವನ್ನು ಖರೀದಿ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಮಗು ಕೊಟ್ಟವರು, ಮಗು ಖರೀದಿ ಮಾಡಿದವರು, ಮಧ್ಯವರ್ತಿಗಳು, ವೈದ್ಯೆ ಸೇರಿ ಒಟ್ಟು ಎಳು ಜನರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನದಲ್ಲಿ ಇರಿಸಿದ್ದಾರೆ.
ವೈದ್ಯೆ ಡಾ. ಭಾರತಿ, ಶಿಶುವಿನ ತಾಯಿ ಕಾವ್ಯ, ಶಿಶು ಖರೀದಿಸಿದ್ದ ಜಯಾ ಹಾಗೂ ಪ್ರಶಾಂತ್ ಕುಮಾರ್ ದಂಪತಿ, ಮಧ್ಯವರ್ತಿಗಳಾದ ವಾದಿರಾಜ್, ಮಂಜಮ್ಮ ಬಂಧಿತರು.
ನಕಲಿ ದಾಖಲೆಗಳನ್ನು ಸೃಷ್ಟಿಸಿ ನವಜಾತ ಶಿಶುವೊಂದನ್ನು ಐದು ಲಕ್ಷಕ್ಕೆ ಮಾರಾಟ ಮಾಡಲಾಗಿದ್ದು, ಪ್ರಕರಣ ಸಂಬಂಧ ದಾವಣಗೆರೆಯ ಮೆಮೋರಿಯಲ್ ಆಸ್ಪತ್ರೆಯ ವೈದ್ಯೆ ಡಾ.ಭಾರತಿ ಸೇರಿ 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಮಾಹಿತಿ ನೀಡಿದ್ದಾರೆ.
ಆಗಸ್ಟ್ 26 ರಂದು ಮಗುವಿನ ತಾಯಿ ಕಾವ್ಯ ಅವರು ತಮಗೆ ಈಗಾಗಲೇ ಇಬ್ಬರು ಮಕ್ಕಳಿದ್ದು, ಈ ಮಗುವನ್ನು ಸಾಕಲು ಆಗುವುದಿಲ್ಲ ಎಂಬ ಸಬೂಬು ಹೇಳಿ ಮಾರಾಟ ಮಾಡಿದ್ದರು. ದಾವಣಗೆರೆ ದಂಪತಿ ಪ್ರಶಾಂತ ಕುಮಾರ್ ಹಾಗೂ ಜಯಾ ಎಂಬುವರು 5 ಲಕ್ಷ ಹಣ ನೀಡಿ ಮಗುವನ್ನು ಖರೀದಿಸಿದ್ದರು. ಮಗು ಮಾರಾಟಕ್ಕೆ ಟಿ. ವಾದಿರಾಜ್ ಹಾಗೂ ಮಂಜಮ್ಮ ಅಲಿಯಾಸ್ ಮಂಜುಳಾ ಎಂಬ ದಂಪತಿ ಬ್ರೋಕರ್ ಕೆಲಸ ಮಾಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹಸುಗೂಸಿನ ಮುಖ ನೋಡದೇ ಕಾವ್ಯ ಅವರು ಮಗು ಮಾರಾಟ ಮಾಡಿದ್ದರು. ಬಳಿಕ ಎಂಕೆ ಮೆಮೋರಿಯಲ್ ಆಸ್ಪತ್ರೆಯಲ್ಲಿ ಮಗು ಜನಿಸಿದ್ದು, ಈ ಮಗು ಪ್ರಶಾಂತ್ ಕುಮಾರ್ ಮತ್ತು ಜಯಾ ಅವರಿಗೆ ಜನಿಸಿದೆ ಎಂದು ಆರೋಪಿಗಳು ನಕಲಿ ದಾಖಲೆ ಸೃಷ್ಟಿಸಿದ್ದರು. ನಕಲಿ ದಾಖಲೆಗಳನ್ನು ನೀಡಿದ ಆರೋಪಿಗಳು ಮಹಾನಗರ ಪಾಲಿಕೆಯಲ್ಲಿ ಮಗುವಿನ ಜನನ ಪ್ರಮಾಣಪತ್ರ ಪಡೆದಿದ್ದರು. ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಎಸ್ಪಿ ಉಮಾಪ್ರಶಾಂತ್ ಪ್ರಕರಣದ ಬಗ್ಗೆ ವಿವರಿಸಿದರು.