Visitors have accessed this post 730 times.

ಸುಟ್ಟ ಸ್ಥಿತಿಯಲ್ಲಿ ಯುವಕನ ಶವ ಪತ್ತೆ, ಇನ್ಸ್ಟಾಗ್ರಾಮ್ ಸುಂದರಿ ಬಂಧನ..!

Visitors have accessed this post 730 times.

ಸುಟ್ಟ ಸ್ಥಿತಿಯಲ್ಲಿ ಯುವಕನೊಬ್ಬನ ಶವ ಪತ್ತೆಯಾದ ಪ್ರಕರಣ ಹೊಸ ತಿರುವು ಪಡೆದಿದ್ದು, ಇನ್ಸ್ಟಾಗ್ರಾಮ್ ಪರಿಚಯವಾದ ಸುಂದರಿ ಮಾಡಿಸಿದ್ದ ಕೊಲೆ ರಹಸ್ಯ ಬಹಿರಂಗಗೊಂಡಿದೆ.

ಸೆ.30 ರಂದು ಶರಣಪ್ಪ ಮಸ್ಕಿ ಎಂಬ ಯುವಕ ಮನೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ. ಈತನ ಮೈಮೇಲೆ ಸುಟ್ಟ ಗಾಯದ ಗುರುತು ಗಮನಿಸಿದ ಪೊಲೀಸರಿಗೆ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎನ್ನುವುದೇ ಗೊತ್ತಾಗಲಿಲ್ಲ. ನಂತರ ತನಿಖೆ ಕೈಗೊಂಡಾಗ ಆಸಲಿಯತ್ತು ಬಯಲಿಗೆ ಬಂದಿದೆ. ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾಗಿದ್ದ ಬೆಳಗಾವಿ ಜಿಲ್ಲೆಯ ಮುಗಳಖೋಡ ಗ್ರಾಮದ ನಿವಾಸಿಗಳಾದ ಭಾಗ್ಯಶ್ರೀ (30)ಮತ್ತು ಇಬ್ರಾಹೀಂನನ್ನು ಕುಷ್ಠಗಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಭಾಗ್ಯಶ್ರೀಗೆ ಮದುವೆಯಾಗಿ 4 ವರ್ಷದ ನಂತರ ಪತಿ ಮೃತಪಟ್ಟಿದ್ದರು 1ವರ್ಷದ ಹಿಂದೆ ಶರಣಪ್ಪ ಮಸ್ಕಿ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿದೆ. ಕಾಲ ಕ್ರಮೇಣ ಇದು ಪ್ರೀತಿಗೆ ತಿರುಗಿ ಇಬ್ಬರ ನಡುವೆ ದೈಹಿಕ ಸಂಬಂಧ ಬೆಳೆದಿತ್ತು ಹೀಗಾಗಿ ಆಗಾಗ ಭಾಗ್ಯಶ್ರೀ ಮತ್ತು ಶರಣಪ್ಪ ಹಿರೇಮನ್ನಾಪುರ ಗ್ರಾಮದಲ್ಲಿ ಭೇಟಿಯಾಗುತ್ತಿದ್ದರು ಅವಿವಾಹಿತನಾಗಿದ್ದ ಶರಣಪ್ಪ ಮತ್ತು ಭಾಗ್ಯಶ್ರೀ ಇಬ್ಬರು ಜೊತೆಗಿದ್ದ ಅನೇಕ ಖಾಸಗಿ ಕ್ಷಣಗಳ ಪೋಟೋಗಳನ್ನು ತನ್ನ ಮೊಬೈಲ್‌ನಲ್ಲಿ ತಗೆದುಕೊಂಡಿದ್ದನಂತೆ . ಇದರ ನಡುವೆ ಭಾಗ್ಯಶ್ರೀ ತನ್ನದೇ ಗ್ರಾಮದಲ್ಲಿರುವ ಇಬ್ರಾಹಿಂ ಜೊತೆ ಸಂಬಂಧ ಇರೋದು ಗೊತ್ತಾಗಿತ್ತು. ಹೀಗಾಗಿ ಆತನ ಜೊತೆ ಸೇರದಂತೆ ತಡೆದಿದ್ದ.

ಇದು ಭಾರಿ ವಿವಾದಕ್ಕೆ ಕಾರಣವಾಗಿ ಇಬ್ಬರು ಇರೋ ಪೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡೋದಾಗಿ ಭಾಗ್ಯಶ್ರೀಗೆ ಶರಣಪ್ಪ ಬೆದರಿಕೆ ಹಾಕಿದ್ದ. ಪೋಟೋಗಳು ವೈರಲ್ ಆದ್ರೆ ಏನು ಮಾಡುವುದು ಎಂದು ತಿಳಿಯದೆ ಭಾಗ್ಯಶ್ರೀ ಕಳೆದ ಸೆ.30 ರಂದು ಇಬ್ರಾಹಿಂನನ್ನು ಕರೆದುಕೊಂಡು ಬೈಕ್ ಮೇಲೆ ರಾತ್ರಿ ಹಿರೇಮನ್ನಾಪುರ ಗ್ರಾಮಕ್ಕೆ ಬಂದಿದ್ದಳು. ಅಲ್ಲಿಗೆ ಬಂದ ಶರಣಪ್ಪನನ್ನು ಸಲುಗೆಯಿಂದ ಮಾತನಾಡಿಸಿ ನಂತರ ರಾತ್ರಿ ಎರಡು ಗಂಟೆ ಸಮಯದಲ್ಲಿ ಕೊಲೆ ಮಾಡಿ, ಪೆಟ್ರೋಲ್ ಹಾಕಿ ಶವ ಸುಟ್ಟು, ನಂತರ ಮನೆ ಅಡುಗೆ ಕೋಣೆಯ ಗ್ಯಾಸ್ ಬಳಿ ಶವ ಹಾಕಿ ಪರಾರಿಯಾಗಿದ್ದರು. ಹೋಗುವಾಗ ಶರಣಪ್ಪನ ಮೊಬೈಲ್ ಕೂಡಾ ತಗೆದುಕೊಂಡು ತಮ್ಮೂರಿಗೆ ಹೋಗಿದ್ದ ಭಾಗ್ಯಶ್ರೀ ಆರಾಮಾಗಿದ್ದರು.

ಶರಣಪ್ಪನ ಕೊಲೆಯಾಗಿದ್ದರ ಬಗ್ಗೆ ತನಿಖೆ ಆರಂಭಿಸಿದ್ದ ಕುಷ್ಟಗಿ ಠಾಣೆಯ ಪೊಲೀಸರಿಗೆ ಸೂಕ್ತ ಸಾಕ್ಷಿಗಳಿಗಾಗಿ ಹುಡುಕಾಟ ನಡೆಸಿದ್ದರು. ಆದ್ರೆ ಆರೋಪಿಗಳು ಬಂದು ಕೊಲೆ ಮಾಡಿ ಹೋಗಿದ್ದನ್ನು ಯಾರೂ ನೋಡಿರಲಿಲ್ಲ, ಪ್ರಕರಣ ಪತ್ತೆ ಮಾಡುವುದೇ ಸವಾಲಾಗಿತ್ತು. ಆದರೆ ಕಳೆದ ಕೆಲ ದಿನಗಳಿಂದ ಶರಣಪ್ಪನ ಮೊಬೈಲ್‌ಗೆ ಯಾರೆಲ್ಲರ ಕರೆಗಳು ಬಂದಿವೆ ಅನ್ನೋದನ್ನು ಪತ್ತೆ ಮಾಡಿದಾಗ ಭಾಗ್ಯಳ ನಂಬರ್ ಸಿಕ್ಕಿದೆ. ಹೀಗಾಗಿ ಭಾಗ್ಯಶ್ರೀಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಅಚ್ಚರಿಯೆಂದರೆ ಆರೋಪಿಗಳು ಇಬ್ಬರು ಕೂಡ, ಕೊಲೆ ಮಾಡಲು ಬರುವಾಗ ಮೊಬೈಲ್ ತಂದ್ರೆ ಸಿಕ್ಕಿ ಬೀಳ್ತೇವೆ ಅಂತ ತಿಳಿದು ಮೊಬೈಲ್‌ಗಳನ್ನು ಮನೆಯಲ್ಲಿಯೇ ಬಿಟ್ಟು ಬಂದಿದ್ದರಂತೆ .ಮದುವೆಯಾಗಿ ಚನ್ನಾಗಿ ಸಂಸಾರ ನಡೆಸೋದನ್ನು ಬಿಟ್ಟು, ವಿಧವೆ ಮಹಿಳೆ ಜೊತೆ ಅಕ್ರಮ ಸಂಭಂದ ಹೊಂದಿದ್ದ ಶರಣಪ್ಪ ಕೊಲೆಯಾಗಿ ಬಾರದ ಲೋಕಕ್ಕೆ ಹೋಗಿದ್ದು ಮಾತ್ರ ದುರ್ದೈವದ ಸಂಗತಿಯಾಗಿದೆ.

ಘಟನೆ ವಿವರ: ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇಮನ್ನಾಪುರ ಗ್ರಾಮದ ಇಪ್ಪತ್ತೆರಡು ವರ್ಷದ ಶರಣಪ್ಪ ಕೂಲಿ ಕೆಲಸ ಮಾಡಿಕೊಂಡಿದ್ದ. ತಾಯಿ ಅನೇಕ ವರ್ಷಗಳ ಹಿಂದೆಯೇ ಬಾರದ ಲೋಕಕ್ಕೆ ಹೋಗಿದ್ದಳು. ತಂದೆಗೆ ವಯಸ್ಸಾಗಿದ್ದರಿಂದ, ಆತ ಸಹೋದರಿ ಜೊತೆ ಬೇರೆ ಗ್ರಾಮದಲ್ಲಿ ಇದ್ದಾರೆ. ಅವಿವಾಹಿತನಾಗಿದ್ದ ಶರಣಪ್ಪ ಒಬ್ಬನೇ ಮನೆಯಲ್ಲಿ ಇರ್ತಿದ್ದ. ಆದ್ರೆ ಸೆ. 30 ರಂದು ಮುಂಜಾನೆ ಕೆಲಸಕ್ಕೆ ಕರೆಯಲು ಹೋದಾಗ, ಮನೆ ಬಾಗಿಲು ಒಳಗಿನಿಂದ ಲಾಕ್ ಇರಲಿಲ್ಲ. ಬಾಗಿಲು ದೂಡಿದಾಗ, ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಶವ ನೋಡಿದ ಸುತ್ತಮುತ್ತಲಿನ ಜನರು, ಆತ್ಮಹತ್ಯೆ ಇರಬಹುದು ಅಂತ ಅಂದುಕೊಂಡಿದ್ದರು. ಆದ್ರೆ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಬಂದು ನೋಡಿದಾಗ ಶರಣಪ್ಪನದು ಆತ್ಮಹತ್ಯೆಯ ಬದಲಾಗಿ ಕೊಲೆ ಅನ್ನೋದು ಗೊತ್ತಾಗಿದೆ.

ಪ್ರಕರಣಕ್ಕೆ ಸಂಭಂದಿಸಿದಂತೆ ಕುಷ್ಟಗಿ ಪೊಲೀಸರು ಇದೀಗ ಓರ್ವ ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ

Leave a Reply

Your email address will not be published. Required fields are marked *