ಸುರತ್ಕಲ್: ಸಮುದ್ರ ಪಾಲಾಗಿದ್ದ ಯುವಕನ ಮೃತದೇಹ ಪತ್ತೆ

ಸುರತ್ಕಲ್: ಎನ್‌ಐಟಿಕೆ ಬಳಿಯ ಮಲ್ಲಮಾರ್ ಬೀಚ್‌ನಲ್ಲಿ ಮಂಗಳವಾರ ಸಂಜೆ ಸಮುದ್ರದಲ್ಲಿ ಈಜಾಡಲು ತೆರಳಿದ್ದಾಗ ಸಮುದ್ರಪಾಲಾಗಿದ್ದ ಬಂಟ್ವಾಳ ಮಯ್ಯರಬೈಲು ರಸ್ತೆ ನಿವಾಸಿ ಪ್ರಜ್ವಲ್ (21) ರವರ ಮೃತದೇಹ ಸಸಿಹಿತ್ಲು ಬಳಿ ಆಳ ಸಮುದ್ರದಲ್ಲಿ ಗುರುವಾರ ಪತ್ತೆಯಾಗಿದೆ. ಆಳ ಸಮುದ್ರದಲ್ಲಿ ಮೃತದೇಹ ಕಂಡು ಬಂದ ಬಗ್ಗೆ ಮಾಹಿತಿ ಪಡೆದ ಕರಾವಳಿ ರಕ್ಷಣಾ ಪಡೆ ಪೊಲೀಸರು ಇದನ್ನು ತೀರಕ್ಕೆ ಸಾಗಿಸಿದ್ದು, ಸ್ಥಳೀಯ ಮೀನುಗಾರರ ನೆರವು ಪಡೆದು ನಾಡದೋಣಿ ಮೂಲಕ ಸಸಿಹಿತ್ತು ಜೆಟ್ಟಿಗೆ ತರಲಾಯಿತು. ಬಳಿಕ ಸುರತ್ಕಲ್ ಠಾಣೆ ಪೊಲೀಸರ ವಶ ನೀಡಲಾಯಿತು. ಸತತ ಶೋಧ ಕಾರ್ಯಾಚರಣೆಯಲ್ಲಿ ಕರಾವಳಿ ರಕ್ಷಣಾ ಪೊಲೀಸರು, ಕದ್ರಿ ಅಗ್ನಿ ಶಾಮಕದ ದಳ, ಎಸ್‌ ಡಿಆರ್ ಎಫ್, ಸ್ಥಳೀಯರು, ಸುರತ್ಕಲ್ ಠಾಣೆ ಪೊಲೀಸರು ಭಾಗವಹಿಸಿದ್ದರು. ಮರಣೋತ್ತರ ಪರೀಕ್ಷೆ ಬಳಿಕ ಮನೆಯವರಿಗೆ ಮೃತದೇಹ ಹಸ್ತಾಂತರಿಸಲಾಯಿತು. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಇಡ್ಯಾ ಸುರತ್ಕಲ್, ಲೈಟ್ ಹೌಸ್, ಎನ್‌ಐಟಿಕೆ, ಮಲ್ಲಮಾರ್, ಮುಕ್ಕ ಮತ್ತಿತರ ಬೀಚ್ ಗಳಲ್ಲಿ ಹೆಚ್ಚಾಗಿ ಹೊರ ಜಿಲ್ಲೆಗಳ ಯುವಕರೇ ಸಮುದ್ರಪಾಲಾಗುತ್ತಿದ್ದಾರೆ. ಈ ಬಗ್ಗೆ ಎಚ್ಚರಿಕೆಯ ನಾಮಫಲಕ ನಾಲ್ಕು ಭಾಷೆಗಳಲ್ಲಿ ಅಳವಡಿಸಬೇಕು ಎಂದು ಬೆಂಗಳೂರಿನ ಪ್ರವಾಸೋದ್ಯಮ ಇಲಾಖೆ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿರುವುದಾಗಿ ಸಾಮಾಜಿಕ ಕಾರ್ಯಕರ್ತ ಪುಷ್ಪರಾಜ್ ಕುಳಾಯಿ ತಿಳಿಸಿದ್ದಾರೆ.

Leave a Reply