ಸರಕಾರಿ ಉದ್ಯೋಗ ಕೊಡಿಸುವುದಾಗಿ ಹಣ ಪಡೆದು ವಂಚನೆ- ಡಿವೈಎಫ್ಐ ಮಾಜಿ ಸದಸ್ಯೆಯ ಬಂಧನ

ಕಾಸರಗೋಡು : ಹಣ ಪಡೆದು ಉದ್ಯೋಗ ಕೊಡಿಸುವುದಾಗಿ ಹೇಳಿ ಜನರನ್ನು ವಂಚಿಸಿದ ಆರೋಪಿ ಶಾಲಾ ಶಿಕ್ಷಕಿಯನ್ನು ವಿದ್ಯಾನಗರ ಪೊಲೀಸರು ಗುರುವಾರ ಸಂಜೆ ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಪೆರ್ಲ ಶೇಣಿ ಬಳ್ತಕ್ಕಲ್ ನಿವಾಸಿ ಸಚಿತ ರೈ (27) ಎಂದು ಗುರುತಿಸಲಾಗಿದೆ. ಆಕೆ 12ಕ್ಕೂ ಹೆಚ್ಚು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾಳೆ ಎಂದು ವರದಿಯಾಗಿದೆ. ಆಕೆಯ ವಿರುದ್ಧ ಉಪ್ಪಿನಂಗಡಿ, ಬದಿಯಡ್ಕ, ಕುಂಬಳೆ, ಮಂಜೇಶ್ವರ, ಕಾಸರಗೋಡು, ಆದೂರು, ಮೇಲ್ಪರಂಬ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ. ಕೆಲ ದಿನಗಳಿಂದ ತಲೆಮರೆಸಿಕೊಂಡಿದ್ದರು.ಗುರುವಾರ ಸಂಜೆ ನ್ಯಾಯಾಲಯಕ್ಕೆ ಶರಣಾಗಲು ಆಗಮಿಸಿದ ಆಕೆಯನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.ಸಿಪಿಸಿಆರ್‌ಐ (ಸೆಂಟ್ರಲ್‌ ಪ್ಲಾಂಟೇಶನ್‌ ಕ್ರಾಪ್ಸ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌), ಕೇಂದ್ರೀಯ ವಿದ್ಯಾಲಯ, ಕರ್ನಾಟಕ ಅಬಕಾರಿ ಇಲಾಖೆ, ಅರಣ್ಯ ಇಲಾಖೆ, ಎಸ್‌ಬಿಐ ಮುಂತಾದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ವ್ಯಕ್ತಿಗಳಿಂದ ಲಕ್ಷ ಲಕ್ಷ ರೂಪಾಯಿಗಳನ್ನು ಸಚಿತಾ ಸಂಗ್ರಹಿಸಿದ್ದರು. ಕುಂಬಳೆ ಕಿದೂರಿನ ನಿಶ್ಮಿತಾ ಶೆಟ್ಟಿ ಎಂಬವರು ಮೊದಲ ದೂರು ದಾಖಲಿಸಿದ್ದು, ಸಚಿತಾ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.ಇದರ ಬೆನ್ನಲ್ಲೇ ಇತರ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ. ಸಿಪಿಸಿಆರ್‌ಐನಲ್ಲಿ ಕೆಲಸ ಕೊಡಿಸುವುದಾಗಿ ಸಚಿತಾ ನಿಶ್ಮಿತಾ ಶೆಟ್ಟಿಗೆ ಸುಮಾರು 15 ಲಕ್ಷ ರೂಪಾಯಿ ವಂಚಿಸಿದ್ದಾರೆ. ಅಲ್ಲದೆ ಕೇಂದ್ರೀಯ ವಿದ್ಯಾಲಯದಲ್ಲಿ ಕೆಲಸ ಕೊಡಿಸುವುದಾಗಿ ದೇಲಂಪಾಡಿಯ ಸುಚಿತ್ರಾ ರಾವ್ ಎಂಬುವವರಿಂದ 7,31,500 ರೂ. ವಂಚಿಸಿದ್ದಾರೆ.ಪೊಲೀಸರು ತನಿಖೆ ಮುಂದುವರೆಸಿದ್ದು, ಇನ್ನಷ್ಟು ವಂಚನೆ ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ. ಪೊಲೀಸ್ ಮೂಲಗಳ ಪ್ರಕಾರ, ಸಚಿತಾ ರೈ ಡಿವೈಎಫ್‌ಐ ಜಿಲ್ಲಾ ಸಮಿತಿಯ ಮಾಜಿ ಸದಸ್ಯೆಯಾಗಿದ್ದು, ಬಾದೂರಿನ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

Leave a Reply