ಮಂಗಳೂರು: ಎಫ್‌ಬಿ ಖಾತೆಯನ್ನು ಹ್ಯಾಕ್ ಮಾಡಿ ಅಶ್ಲೀಲ, ಬೆದರಿಕೆ ಸಂದೇಶ ರವಾನಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ ಕೃತ್ಯಕ್ಕೆ ಮನನೊಂದ ಯುವತಿಯೊಬ್ಬಳು ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆಗೆ ಸಂಬಂಧಿಸಿ ಆರೋಪಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ಸುರತ್ಕಲ್ ಇಡ್ಯಾ ಗ್ರಾಮದ ನಿವಾಸಿ ಶಾರೀಕ್ ಬಂಧಿತ ಆರೋಪಿ. ಮಂಗಳೂರು ಮಧ್ಯ ಗ್ರಾಮದ ನಿವಾಸಿಯಾದ ಸಂತ್ರಸ್ತೆಯ ಫೇಸ್ಬುಕ್ ಖಾತೆಯನ್ನು ಈತ ಹ್ಯಾಕ್ ಮಾಡಿ, ಅಶ್ಲೀಲ ಸಂದೇಶಗಳು ಮತ್ತು ಬೆದರಿಕೆ ಸಂದೇಶಗಳನ್ನು ಆಕೆಯ ಅಣ್ಣ ಹಾಗೂ ಸ್ನೇಹಿತರಿಗೆ ಕಳುಹಿಸುತ್ತಿದ್ದ ಶಾರೀಕ್ ಮೇಲೆ ಶಂಕೆ ವ್ಯಕ್ತಪಡಿಸಿ ಸಂತ್ರಸ್ತೆ ಅ.21ರಂದು ಸುರತ್ಕಲ್ ಠಾಣೆಗೆ ದೂರು ನೀಡಿದ್ದಾರೆ. ಸಂತ್ರಸ್ತೆಯ ದೂರು ಆಧರಿಸಿ, ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಲಾಗಿದೆ. ಆರೋಪಿ ಶಾರೀಕನನ್ನು ವಿಚಾರಣೆಗಾಗಿ ಠಾಣೆಗೆ ಕರೆಸಲಾಗಿದ್ದು, ಆತನ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಖಾತೆಯನ್ನು ಪರಿಶೀಲಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಹೆಚ್ಚಿನ ಮಾಹಿತಿಗಳು ಲಭ್ಯವಾಗದ ಹಿನ್ನೆಲೆ, ಸಂಬಂಧಿತ ಸೋಶಿಯಲ್ ಮೀಡಿಯಾ ಕಂಪನಿಗಳಿಂದ ಹೆಚ್ಚಿನ ಮಾಹಿತಿ ಒದಗಿಸಲು ಕೋರಲಾಗಿದೆ. ಅಕ್ಟೋಬರ್ 24ರಂದು, ಸಂತ್ರಸ್ತೆಗೆ ಮತ್ತೊಮ್ಮೆ ಬೆದರಿಕೆ ಸಂದೇಶ ಬಂದಿದೆ. ಪರಿಣಾಮ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ ಆಕೆ ತನ್ನ ಬದುಕು ಅಂತ್ಯಗೊಳಿಸಲು ಆತ್ಮಹತ್ಯೆ ಯತ್ನಕ್ಕೆ ನಿರ್ಧರಿಸಿದ್ದಾಳೆ. ಆತ್ಮಹತ್ಯೆ ಯತ್ನಕ್ಕೂ ಮುನ್ನ ಶಾರೀಕ್ ಮತ್ತು ಆತನ ತಾಯಿ ನೂರ್‌ಜಹಾನ್ ನೀಡಿದ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ ಎಂದು ಅಕ್ಟೋಬರ್ 25ರಂದು ಮುಂಜಾನೆ ಡೋಲೊ ಮಾತ್ರೆಗಳನ್ನು ಸೇವಿಸಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ನೀಡಲಾಗಿದ್ದು, ಈಗ ಅವರ ಆರೋಗ್ಯ ಸ್ಥಿರವಾಗಿದೆ. ಸಂತ್ರಸ್ತೆಯ ಹೇಳಿಕೆಯನ್ನು ಆಧರಿಸಿ, ಪ್ರಕರಣದಲ್ಲಿ ಮತ್ತೊಂದು ದಾಖಲಾತಿ ಮಾಡಲಾಗಿದ್ದು, ಪ್ರಕರಣ ಸಂಖ್ಯೆ 125/24 ಅಡಿಯಲ್ಲಿ ಶಾರೀಕ್ ವಿರುದ್ಧ ಹೆಚ್ಚುವರಿ ಆರೋಪಗಳನ್ನು ಪ್ರಸ್ತಾಪಗೊಳಿಸಲಾಗಿದೆ.